ಬೆಂಗಳೂರು: ಮೊಬೈಲ್ ಗೆ ಮಕ್ಕಳು ಎಷ್ಟು ಅಡಿಕ್ಟ್ ಆಗಿದ್ದಾರೆ ಅಂದ್ರೆ ಬೇರೆ ಲೋಕವೇ ಕಾಣಿಸ್ತಾ ಇಲ್ಲ. ಇದರಿಂದ ಓದಿನ ಮೇಲೂ ಪ್ರಭಾವ ಬೀರಲಿದೆ. ಇದನ್ನ ಅರಿತಿರುವ ಸರ್ಕಾರ ಶಾಲಾ – ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡುವುದಕ್ಕೆ ನಿರ್ಧಾರ ಮಾಡಿದೆ. ಈ ಸಂಬಂಧ ಎಲ್ಲಾ ವಿವಿಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆದಿದೆ. ಆ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿಗಳು ವಿಸಿಗಳಿಂದಲೂ ಅಭಿಪ್ರಾಯ ಕೇಳಿದ್ದಾರೆ. ಪ್ರಸ್ತಾಪಕ್ಕೆ ವಿಶ್ವವಿದ್ಯಾಲಯದ ಕುಲಪತಿಗಳಿಂದಲೂ ಒಪ್ಪಿಗೆ ಸಿಕ್ಕಿದೆ. 16 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕಿದ್ದು, ಆಸ್ಟ್ರೇಲಿಯಾ ಸೇರಿ ಅನೇಕ ದೇಶಗಳಲ್ಲಿ ಈ ನಿಯಮ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಳಾಗುತ್ತಿರುವ ಕಾರಣ ಮೊಬೈಲ್ ಬಳಕೆ ನಿಷೇಧ ಮಾಡಲು ಚಿಂತನೆ ನಡೆಸಲಾಗಿದೆ.
ಸ್ಟೂಡೆಂಟ್ ಎಲೆಕ್ಷನ್ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ವಿದ್ಯಾರ್ಥಿ ಚುನಾವಣೆ ಮಾಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ನಮ್ಮ ಕಾಲದಲ್ಲಿ ಚುನಾವಣೆ ಇತ್ತು, ನಾವು ಅಲ್ಲಿಂದಲೇ ಬಂದಿರುವುದು. ಹೀಗಾಗಿ ಷರತ್ತುಗಳನ್ನು ಹಾಕಿ ಚುನಾವಣೆಗೆ ಅವಕಾಶ ಕೊಡಲು ಚಿಂತನೆ ಇದೆ. ಚುನಾವಣೆ ಆಗದಿದ್ರೆ ವಿದ್ಯಾರ್ಥಿಗಳು ನಾಯಕರಾಗಿ ಹೇಗೆ ಬೆಳೆಯೋದು? ಭಾರತದಲ್ಲಿ ವಿದ್ಯಾರ್ಥಿ ನಾಯಕರು ಇಲ್ಲವೇ ಇಲ್ಲ ಎಂದ ಸಿಎಂ, ಈ ಬಗ್ಗೆ ಸಲಹೆ ಕೊಡುವಂತೆ ವಿಸಿಗಳಿಗೆ ಸೂಚಿಸಿದ್ದಾರೆ. ಇನ್ಮುಂದೆ ಮೊಬೈಕ್ ಬಳಕೆಗೆ ಕಡಿವಾಣ ಬಿದ್ದರೆ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚು ಗಮನ ಕೊಡುವುದಕ್ಕೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ.




