ಚಿತ್ರದುರ್ಗ, ಸೆ.11: ಕಣ್ಣುಗಳು ನಮ್ಮ ಆತ್ಮದ ಕಿಟಕಿಗಳಿದ್ದಂತೆ. ಅದರ ರಕ್ಷಣೆ ಅಮೂಲ್ಯವಾದದ್ದು. ಪ್ರತಿಯೊಬ್ಬರು ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಗೋನೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಅಂದತ್ವ ನಿವಾರಣಾ ವಿಭಾಗ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಶಂಕರ ಕಣ್ಣಿನ ಆಸ್ಪತ್ರೆ, ಬೆಂಗಳೂರು ದಿ ಟೈಟನ್ ಕಂಪನಿ ಲಿಮಿಟೆಡ್, ಗೋನೂರು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೇತ್ರ ತಪಾಸಣೆ ಚಿಕಿತ್ಸಾ ಶಿಬಿರವು ಕೇವಲ ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೇ, ಪ್ರತಿ ತಿಂಗಳು ಚಿತ್ರದುರ್ಗ ತಾಲ್ಲೂಕಿನ ಆಯ್ದ ಮೂರು ಗ್ರಾಮಗಳಲ್ಲಿ ಶಿಬಿರ ನಡೆಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಇದಲ್ಲದೆ ಗ್ರಾಮದ ಇತರೆ ಸಮಸ್ಯೆಗಳಿಗೂ ಸ್ಪಂದಿಸುತ್ತೇನೆ. ಅಲ್ಲದೆ ಸಂಚಾರಿ ಡಯಾಲಿಸಿಸ್ ಘಟಕ ಶೀಘ್ರದಲ್ಲೇ ಪ್ರಾರಂಭಿಸಲು ಯೋಜನೆ ರೂಪಿಸುತ್ತಿದ್ದೇನೆ ಎಂದರು.
ಚಿತ್ರನಟ, ಕಲಾವಿದ ದೊಡ್ಡಣ್ಣ ಮಾತನಾಡಿ, ಕಳೆದ 13 ವರ್ಷಗಳಿಂದ ಕಣ್ಣುಗಳ ಆರೈಕೆಗಾಗಿ ಸೇವೆ ಸಲ್ಲಿಸುತ್ತಾ, ಸಮಾಜ ಸೇವಕನಾಗಿ ಚಿತ್ರರಂಗದ ಒಬ್ಬ ನಟನಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಯವರೆಗೂ ಒಟ್ಟು 1025 ಉಚಿತ ಶಸ್ತ್ರ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನ ಮಾಡಿಸಲಾಗಿದೆ. ಪಂಚ ಇಂದ್ರಿಯಗಳಲ್ಲಿ ಪ್ರಧಾನವಾದ ಇಂದ್ರಿಯ ಕಣ್ಣು ಆಗಿರುತ್ತದೆ. ಕಣ್ಣುಗಳನ್ನು ದಾನ ಮಾಡುವವರು ಮುಂದೆ ಬನ್ನಿ. ಅಂದತ್ವ ನಿವಾರಣೆಗಾಗಿ ಎಲ್ಲರೂ ಕೈ ಜೋಡಿಸಿ ಎಂದರು.
ಇದೇ ಸೆಪ್ಟೆಂಬರ್ 12ರಂದು ದೊಡ್ಡಸಿದ್ದವ್ವನಹಳ್ಳಿ, 13ರಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಜಾಲಿಕಟ್ಟ ಗ್ರಾಮ, 14ರಂದು ಸೊಂಡೆಕೊಳ ಗ್ರಾಮ ಪಂಚಾಯಿತಿಯಲ್ಲಿ ಉಚಿತ ನೇತ್ರ ತಪಾಸಣೆ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಶಿಬಿರ ನಡೆಯಲಿದೆ. ಆಯಾ ಗ್ರಾಮ ಪಂಚಾಯಿತಿಗಳ ಸಾರ್ವಜನಿಕರು ಶಿಬಿರದ ಉಪಯೋಗ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್ ರಂಗನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಜಯಶ್ರೀ, ರಾಷ್ಟ್ರೀಯ ಅಂದತ್ವ ನಿವಾರಣ ಕಾರ್ಯಕ್ರಮದ ಅನುಷ್ಟಾನಾಧಿಕಾರಿ ಡಾ. ಚಂದ್ರಶೇಖರ್, ಗೋನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಂಡಮ್ಮ, ತಾಪಂ ಇಒ ಹನುಮಂತಪ್ಪ, ಎಸ್‍ಆರ್‍ಎಸ್ ವಿದ್ಯಾಸಂಸ್ಥೆಯ ಲಿಂಗಾರೆಡ್ಡಿ, ಪಿಡಿಒ ಹೆಚ್.ಯರ್ರಿಸ್ವಾಮಿ, ಶಂಕರ ಕಣ್ಣಿನ ಆಸ್ಪತ್ರೆಯ ಮಂಜುನಾಥ್ ಸೇರಿದಂತೆ ಮತ್ತಿತರರು ಇದ್ದರು.