ಚಿತ್ರದುರ್ಗ,(ಡಿಸೆಂಬರ್.07) : ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ 4ಕ್ಕೆ ತೆರೆಬಿದ್ದಿದೆ.
ಭಾರತ ಚುನಾವಣಾ ಆಯೋಗದ ಆದೇಶದಂತೆ ಮತದಾನ ಮುಕ್ತಾಯಗೊಳ್ಳುವ 72 ಗಂಟೆಗಳ ಮುಂಚೆ ಡಿಸೆಂಬರ್ 07ರಂದು ಸಂಜೆ 4 ಗಂಟೆಯೊಳಗಾಗಿ ಕ್ಷೇತ್ರದ ಮತದಾರರನ್ನು ಹೊರತುಪಡಿಸಿ, ಉಳಿದವರು ಕ್ಷೇತ್ರವನ್ನು ಬಿಟ್ಟುಹೋಗತಕ್ಕದ್ದು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಸಲುವಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ ನೀಡಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ನವೀನ್ ಕೆ.ಎಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸೋಮಶೇಖರ್ ಬಿ ಹಾಗೂ ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ಸೇರಿದಂತೆ ಒಟ್ಟು ಮೂವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚುನಾವಣಾ ವೀಕ್ಷಕರ ನೇಮಕ: ಕರ್ನಾಟಕ ವಿಧಾನ ಪರಿಷತ್‍ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಚುನಾವಣೆ-2021ರ ಸಂಬಂಧ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ನವೀನ್‍ರಾಜ್ ಸಿಂಗ್ ಅವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಮೊಬೈಲ್ ಸಂಖ್ಯೆ 7760057142 ಗೆ ಸಂಪರ್ಕಿಸಬಹುದಾಗಿದೆ.