ಬಾಗಲಕೋಟೆ: ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವಾಗಲೇ ಬಿಜೆಪಿಯಲ್ಲಿನ ಹಲವರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂಬ ಮಾತನ್ನು ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಬಿಜೆಪಿಯಲ್ಲಿನ ಅತೃಪ್ತ ಶಾಸಕರು ಕಾಂಗ್ರೆಸ್ ಗೆ ಸೇರಲಿದ್ದಾರೆ ಎಂದಿದ್ದಾರೆ.
ಬಿಜೆಪಿಯ ಹಲವು ಅತೃಪ್ತ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ನಾವೂ ಜನವರಿ 26ರ ನಂತರ ಅದರ ಪ್ರಕ್ರಿಯೆ ಮುಂದುವರೆಸುತ್ತೇವೆ. ಎಷ್ಟು ಮಂದಿ ಕಾಂಗ್ರೆಸ್ ಸೇರುತ್ತಾರೆ ಎಂಬುದನ್ನು ನೀವೆ ನೋಡುತ್ತೀರಿ. ಬಿಜೆಪಿಯಿಂದ ಬಂದವರಿಗೆ ಅನ್ಯಾಯ ಆಗಬಾರದು. ಹೀಗಾಗಿ ಅವರ ಇಚ್ಛೆಯಂತೆ ಕಾಂಗ್ರೆಸ್ ಗೆ ಸೇರುವವರನ್ನು ಗೌರವಯುತವಾಗಿ ಸ್ವಾಗತಿಸಲಾಗುವುದು. ಲಿಂಗಾಯತರು ಮಾತ್ರವಲ್ಲ, ಕಾಂಗ್ರೆಸ್ ಎಲ್ಲರನ್ನು ಸ್ವಾಗತಿಸುತ್ತದೆ.
ಸಂಸತ್ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲಲು ಈಗಾಗಲೇ ಸಿದ್ಧತೆ ನಡೆಸಿದ್ದೇವೆ. ಇವತ್ತಿನ ಪರಿಸ್ಥಿತಿಯಲ್ಲಿ ಯಾರೇ ಅಧ್ಯಕ್ಷರಾದರೂ ಸಹಿಸಿಕೊಳ್ಳುವುದು ಕಷ್ಟವಿದೆ. ಈಗಾಗಲೇ ಬಿಜೆಪಿಯಲ್ಲಿ ಸಾಕಷ್ಟು ಅಸಮಾಧಾನವಿದೆ. ಅದು ಸ್ಪೋಟ ಆಗುವುದು ಒಂದೇ ಬಾಕಿ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಹೆಚ್ಚು ಕೇಂದ್ರೀಕೃತವಾಗಿದ್ದರೆ, ವಿಜಯೇಂದ್ರ ಅವರು ದಕ್ಷಿಣ ಕರ್ನಾಟಕದ ಮೈಸೂರು, ಬೆಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸೀಮಿತರಾಗಿದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಪಕ್ಷದ ನಿರ್ಧಾರಕ್ಕೆ ಬಿಜೆಪಿಯ ಹಲವು ನಾಯಕರಿಗೆ ಒಪ್ಪಿಗೆಯಿಲ್ಲ. ವಿಜಯೇಂದ್ರ ಅವರಂತಹ ಕಿರಿಯ ನಾಯಕರ ಅಡಿಯಲ್ಲಿ ಕೆಲಸ ಮಾಡುವುದು ಹೇಗೆ ಎಂದು ಹಿರಿಯ ನಾಯಕರು ಗೊಂದಲಕ್ಕೊಳಗಾಗಿದ್ದಾರೆ ಎಂದಿದ್ದಾರೆ.