ಶಾಸಕರು ಹಗಲು ದರೋಡೆ ಮಾಡುತ್ತಿದ್ದಾರೆ : ಮಾಜಿ ಸಚಿವ ಆಂಜನೇಯ ಆರೋಪ

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 03 : ಹೊಳಲ್ಕೆರೆ ತಾಲೂಕಿನಲ್ಲಿ ಮನೆ ಹಂಚಿಕೆಯ ಸಂದರ್ಭದಲ್ಲಿ ಅನುಸರಿಸಬೇಕಾದಂತಹ ಮಾನದಂಡಗಳನ್ನು ಶಾಸಕರಾದ ಎಂ.ಚಂದ್ರಪ್ಪ ಅನುಸರಿಸಿಲ್ಲ. ಗ್ರಾಮ ಸಭೆಗಳನ್ನು ಮಾಡದೇ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಶಾಸಕರು ಅವರ ಬೆಂಬಲಿಗರಿಗೆ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಪಿಡಿಒಗಳನ್ನು ಎದುರಿಸಿ ಬೆದರಿಸಿ ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗಳ ಮಂಜೂರಾತಿಗೆ ಇಟ್ಟಿದ್ದಾರೆ ಎಂದು ಮಾಜಿ ಸಚಿವ ಕೆಪಿಸಿಸಿ ಉಪಾಧ್ಯಕ್ಷ ಹೆಚ್.ಅಂಜನೇಯ ದೂರಿದ್ದಾರೆ.

 

ನಗರದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಹೊಳಲ್ಕೆರೆ ಶಾಸಕ ಅವರೊಬ್ಬ ದಡ್ಡ ಶಾಸಕ. ಸಾಮಾಜಿಕ ನ್ಯಾಯ ಗೊತ್ತಿಲ್ಲದೇ ಇರುವ ಶಾಸಕ. ದುಡ್ಡು ಹಾಕಿ ದುಡ್ಡು ತೆಗೆಯಲು ಆಗಿರುವ ಶಾಸಕ. ಜನಸೇವೆ ಗೊತ್ತಿಲ್ಲದೇ ಇರುವ ಶಾಸಕ. ಶಾಸಕನಾದವನಿಗೆ ನಿರ್ಲಕ್ಷ್ಯಕ್ಕೆ ಒಳಗಾದ, ದುರ್ಬಲ ಸಮುದಾಯಗಳಿಗೆ ಶಕ್ತಿ ತುಂಬುವ ಗುಣಗಳು ಇರಬೇಕು.. ಅವು ಹೊಳಲ್ಕೆರೆ ಶಾಸಕರಿಗೆ ಇಲ್ಲವೇ ಇಲ್ಲ.. ನೊಂದವರನ್ನು ಕೈಹಿಡಿದು ಮೇಲೆತ್ತುವ ಒಂದೇ ಒಂದು ಗುಣವಿಲ್ಲ.ಡಿ.ಎಂ.ಎಫ್ ಪಂಡನ್ನು ಸಾರ್ವಜನಿಕರ ಹಿತಕ್ಕೆ ಬಳಸಬೇಕು ಆದರೆ ಅದು ಸರಿಯಾಗಿ ಬಳಕೆ ಆಗುತ್ತಿಲ್ಲ. ಡಿ.ಎಂ.ಎಫ್ ಪಂಡನ್ನು ಜಿಲ್ಲಾಡಳಿತ ಹಾಗೂ ಶಾಸಕರು ಶಾಮೀಲಾಗಿ ರಸ್ತೆ ಮೇಲೆ ರಸ್ತೆ ಹಾಕಿ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ದೂರಿದರು.

ಎಲ್ಲಾ ಜಾತಿಯಲ್ಲೂ ಹಿಂದುಳಿದವರಿದ್ದಾರೆ. ಬಡವರಿದ್ದಾರೆ.ಶಾಸಕರಿಗೆ ಹೆಚ್ಚು ಮತ ಹಾಕಿದವರು ವೀರಶೈವರು. ಅವರಿಗೆ ಮತ ನೀಡಿದ ವೀರಶೈವ ಸಮಾಜಕ್ಕೆ ಕೇವಲ 20 ಮನೆಗಳನ್ನು ನೀಡಿದ್ದಾರೆ.. ವೀರಶೈವರು ಇಲ್ಲಿ ಬಹುಸಂಖ್ಯಾತರು. ಹೊಳಲ್ಕೆರೆ ಕ್ಷೇತ್ರದಲ್ಲಿ ಮತ ನೀಡಿದವರನ್ನು ಮೂರ್ಖರನ್ನಾಗಿ ಮಾಡಿದ್ದಾರೆ… ಹಾಗೆಯೇ ಕ್ಷೇತ್ರದಲ್ಲಿ ಹಿಂದುಳಿದ ಜಾತಿಗಳಾದ ಮಡಿವಾಳ, ಲಂಬಾಣಿ, ಛಲವಾದಿ ಮಾದಿಗ ಸಮುದಾಯಗಳನ್ನು ಸಹ ಇದ್ದು ಸರಿಯಾದ ರೀತಿಯಲ್ಲಿ ಮನೆಗಳನ್ನು ಹಂಚಿಕೆ ಮಾಡಿಲ್ಲ.ಮನೆಗಳನ್ನು ಹಂಚಿಕೆ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಮುಂದೆ ಇಟ್ಟಿದ್ದು ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ಸಹಿ ಮಾಡಬಾರದು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮನೆಯ ಹಂಚಿಕೆಯಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೇ ಶಾಸಕರ ಮಾತನ್ನೇ ಕೇಳಿ ಪಟ್ಟಿ ತಯಾರು ಮಾಡಿದ ಪಿಡಿಒಗಳನ್ನು ಅಮಾನತು ಮಾಡಬೇಕು. ಹಾಗೂ ಕಾನೂನು ಅಡಿಯಲ್ಲಿ ಶಿಕ್ಷೆಯಾಗಬೇಕು ಎಂದು ಹೆಚ್.ಅಂಜನೇಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗೋಷ್ಟಿಯಲ್ಲಿ ಡಿಸಿಸಿ ಅಧ್ಯಕ್ಷ ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಮೈಲಾರಪ್ಪ, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಗ್ಯಾರೆಂಟಿ ಅಧ್ಯಕ್ಷರಾದ ಶಿವಣ್ಣ, ಮುದಸಿರ್, ಓ.ಶಂಕರ್, ಲೋಕೇಶ್, ಖಾಸಿಂಆಲಿ, ರಂಗಸ್ವಾಮಿ, ಪ್ರಕಾಶ್, ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *