ಮದಕರಿಪುರ ಕೆರೆ ಹೊಳು ತೆಗೆಯುವ ಕಾರ್ಯಕ್ಕೆ ಶಾಸಕ ವಿರೇಂದ್ರ ಪಪ್ಪಿ ಚಾಲನೆ

4 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಮಾ.13 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ರಾಜ್ಯದಲ್ಲಿನ ವಿವಿಧ ಕೆರೆಗಳ ಹೊಳನ್ನು ತೆಗೆಯುವ ಕಾರ್ಯಕ್ಕೆ ಮುಂದಾಗಿದೆ. ಇದರಂತೆ ತಾಲ್ಲೂಕಿನಲ್ಲಿ ಮದಕರಿಪುರದ ಕರೆಯ ಹೊಳನ್ನು ತೆಗೆಯುವ ಕಾರ್ಯಕ್ಕೆ ಇತ್ತೀಚೆಗೆ ಶಾಸಕರಾದ ವಿರೇಂದ್ರ ಪಪ್ಪಿ ಚಾಲನೆ ನೀಡಿದರು.

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸು ಇದಾಗಿದೆ. ನಮ್ಮ ಆರೋಗ್ಯ ರಕ್ಷಣೆಗೆ ಪರಿಶುದ್ಧ ಗಾಳಿ, ನೀರು ಹಾಗೂ ಪ್ರಶಾಂತ ವಾತಾವರಣ ಅಗತ್ಯ ಸುಂದರ ಪ್ರಕೃತಿ, ಪ್ರಶಾಂತ ಪರಿಸರ ಮತ್ತು ಮಾನವ ಜೀವನ ಪರಸ್ಪರ ಪೂರಕವಾಗಿದ್ದಾಗ ಎಲ್ಲವೂ ಸೊಗಸಾಗಿರುತ್ತದೆ. ಸುಂದರ ಪ್ರಕೃತಿಯನ್ನು ಸುಸ್ಥಿತಿಯಲ್ಲಿ ರಕ್ಷಿಸಿ, ಮುಂದಿನ ಜನಾಂಗಕ್ಕಾಗಿ ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ. ಪ್ರಾಕೃತಿಕ ಅಸಮತೋಲನದಿಂದಾಗಿ ಅತಿವೃಷ್ಟಿ, ಅನಾವೃಷ್ಟಿ, ನೆರೆ, ಬರ, ಭೂಕಂಪ ಮೊದಲಾದ ಪ್ರಾಕೃತಿಕ ವಿಕೋಪಗಳು ಆಗಾಗ ಸಂಭವಿಸುತ್ತವೆ. ಕೆರೆಗಳು ನೀರಿನ ಆಕರವಾಗಿದ್ದು ಸಕಲ ಪ್ರಾಣಿ-ಪಕ್ಷಿಗಳಿಗೂ ಉಪಯುಕ್ತವಾಗಿವೆ. ಮಳೆ ಕೊರತೆ. ಅಕ್ರಮ ಒತ್ತುವರಿ, ಅತಿವೃಷ್ಟಿ-ಅನಾವೃಷ್ಟಿ, ಹೂಳು ತುಂಬಿರುವುದು ಇತ್ಯಾದಿ ಕಾರಣಗಳಿಂದ ಅನೇಕ ಕೆರೆಗಳು ಇಂದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಕೆರೆಗಳ ಪುನಶ್ಚತನಕ್ಕಾಗಿ 2016 ರಿಂದ “ನಮ್ಮೂರು. ನಮ್ಮ ಕೆರೆ” ಎಂಬ ವಿನೂತನ ಕಾರ್ಯಕ್ರಮ ಅನುಷ್ಠಾನಗೊಳಿಸಿ ಜನರಲ್ಲಿ ಜಲಜಾಗೃತಿ ಮೂಡಿಸುವ ಮೂಲಕ ಕೆರೆಗಳಿಗೆ ಕಾಯಕಲ್ಪ ನೀಡಲಾಗುತ್ತಿದ್ದು, ಆಯಾ ಊರಿನ ರೈತರೆ ಇದರ ಸದುಪಯೋಗ ಪಡೆಯುತ್ತಿದ್ದಾರೆ. ರೈತರ ಸಾವಿರಾರು ಎಕ್ರೆ ಗದ್ದೆಗಳು ಫಲವತ್ತಾದ ಕೃಷಿ ಭೂಮಿಯಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕೃಷಿ ಇಳುವರಿ ಅಧಿಕವಾಗಿದೆ. ಕೆರೆಗಳ ಸಂರಕ್ಷಣೆ ಬಗ್ಗೆ ಜನಜಾಗೃತಿ ಉಂಟಾಗಿದೆ.

ಈಗಾಗಲೇ ರಾಜ್ಯದಲ್ಲಿ 813 ಕರೆಗಳ ಹೊಳನ್ನು ತೆಗೆಯಲಾಗಿದೆ. 52 ಕೆರೆಗಳ ಹೊಳನ್ನು ತೆಗೆಯುವ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ 63 ಕೋಟಿ ರೂ.ಗಳನ್ನು ವ್ಯಯ ಮಾಡಲಾಗಿದೆ. ಈ ಕೆರೆಗಳಲ್ಲಿ 214.86 ಲಕ್ಷ ಕ್ಯು.ಮೀ ನಷ್ಟು ಹೊಳನ್ನು ತೆಗೆಯಲಾಗಿದೆ. ಈ ಹೊಳಿನಿಂದ 1,80,497 ರೈತರು ಪ್ರಯೋಜನ ಪಡೆದಿದ್ದಾರೆ, 3,77,845 ಕುಟುಂಬಗಳು ಇದರ ಪ್ರಯೋಜನ ಪಡೆದಿದ್ದಾರೆ. ಈ ಹೊಳು ತೆಗೆದಿದ್ದರಿಂದ ಈ ಕೆರೆಗಳಲ್ಲಿ 2837.48 ಕೋಟಿ ಲೀಟರ್ ನೀರನ್ನು ಸಂಗ್ರಹ ಮಾಡುವ ಸಾಮರ್ಥವನ್ನು ಪಡೆದಿವೆ. 62,787 ಕೊಳವೆಬಾವಿಗಳಿಗೆ ಜಲ ಮರುಪೂರಣಗೊಂಡಿದೆ. 37,060 ಬಾವಿಗಳಿಗೆ ನೀರು ಬಂದಿದೆ. ಈ ಕೆರೆಗಳಲ್ಲಿ ಒತ್ತುವರಿ ಮಾಡಲಾದ 305 ಎಕರೆ ಭೂಮಿಯನ್ನು ತೆರವು ಮಾಡಲಾಗಿದೆ. ಇದರಿಂದಾಗಿ 6998.95 ಎಕರೆ ವಿಸ್ತೀರ್ಣದಲ್ಲಿ ಕರೆಗಳು ಪುನಶ್ಚೇತನಗೊಂಡಿವೆ.

ಚಿತ್ರದುರ್ಗದಲ್ಲಿ 06, ಹೊಳಲ್ಕೆರೆಯಲ್ಲಿ 10, ಚಳ್ಳಕೆರೆಯಲ್ಲಿ 04 ಹೊಸದುರ್ಗದಲ್ಲಿ 07, ಮೊಳಕಾಲ್ಮೂರಿನಲ್ಲಿ 03 ಹಾಗೂ ನಾಯಕನಹಟ್ಟಿಯಲ್ಲಿ 01 ಕೆರೆಗಳ ಹೊಳನ್ನು ತೆಗೆಯಲಾಗಿದೆ. ಈ ಕೆರೆಗಳ ಹೊಳನ್ನು ತೆಗೆದಿದ್ದರಿಂದ ಸಾವಿರಾರು ರೈತರಿಗೆ ಅನುಕೂಲವಾಗಿದೆ ಇದರ ಮಣ್ಣನ್ನು ತಮ್ಮ ಹೊಲಗಳಿಗೆ ತೆಗೆದುಕೊಂಡು ಹೋಗಿದ್ದಾರೆ. ಕೊಳವೆಬಾವಿಗಳಲ್ಲಿ ಅಂರ್ತಜಲ ಹೆಚ್ಚಾಗಿದೆ. ಬಾವಿಗಳಲ್ಲಿ ನೀರು ಬಂದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕೆರೆಗಳ ಹೊಳನ್ನು ತೆಗೆಯಲು ಬೇಡಿಕೆ ಬಂದಲ್ಲಿ ತೆಗೆಯಲಾಗುವುದು ಇದಕ್ಕೆ ಯಾವುದೇ ಗುರಿ ಇಲ್ಲ ಎಷ್ಟು ಬೇಕಾದರೂ ಸಹಾ ಕೆರೆಗಳ ಹೊಳನ್ನು ತೆಗೆಯಬಹುದಾಗಿದೆ. ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಮತ್ತು ಸಹಕಾರ ದೊರಕಿದೆ. ಕೆರೆಗಳ ಸದುಪಯೋಗ ಪಡೆದು ರೈತರು ತಮ್ಮ ಆದಾಯ ಹೆಚ್ಚಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವಂತಾಗಿದೆ. ಮದಕರಿಪುರದ ಕೆರೆಯಲ್ಲಿ ಪ್ರತಿ ದಿನ 30 ರಿಂದ 40 ಲೋಡು ಟ್ರಾಕ್ಟರ್ ಕೆರೆಯ ಹೊಳನ್ನು ತೆಗೆಯಲಾಗುತ್ತಿದೆ ಇದಕ್ಕಾಗಿ ಜೆಸಿಬಿ ಹಾಗೂ ಹಿಟಾಚಿಯನ್ನು ಬಳಕೆ ಮಾಡಲಾಗುತ್ತಿದೆ. ರೈತರೇ ಮುಂದೆ ಬಂದು ತಮ್ಮ ಟ್ರಾಕ್ಟರ್ ಮೂಲಕ ಕೆರೆಯ ಹೊಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

 


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ನಮ್ಮ ಗ್ರಾಮದ ಕೆರೆಯ ಹೊಳನ್ನು ತೆಗೆಯುವುದರಿಂದ ನಮ್ಮಗೆ ತುಂಬಾ ಅನುಕೂಲವಾಗಿದೆ. ಈ ಕೆರೆಯ ಹೊಳನ್ನು ಯಾರೂ ಸಹಾ ತೆಗೆದಿರಲಿಲ್ಲ, ಕೆರೆಯಲ್ಲಿ ಹೊಳು ತುಂಬಿದ್ದರಿಂದ ಕೆರೆಯಲ್ಲಿ ನೀರು ನಿಲ್ಲುವ ಪ್ರಮಾಣ ಕಡಿಮೆಯಾಗಿದೆ. ಈಗ ಹೊಳನ್ನು ತೆಗೆಯುವುದರಿಂದ ಮುಂದೆ ಮಳೆ ಬಂದಾಗ ಇಲ್ಲಿ ನೀರಿನ ಸಂಗ್ರಹ ಹೆಚ್ಚಾಗಲಿದೆ ಎನ್ನುತ್ತಾರೆ ಮದಕರಿಪುರ ಕೆರೆ ಅಭೀವೃದ್ದಿ ಸಮಿತಿಯ ಅಧ್ಯಕ್ಷ ನವೀನ್ ಕುಮಾರ್.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಉಚಿತವಾಗಿ ಕೆರೆಯ ಹೊಳನ್ನು ತೆಗೆಯುತ್ತಿದ್ದಾರೆ ಅವರೇ ಜೆಸಿಬಿಯಿಂದ ನಮ್ಮ ಟ್ರಾಕ್ಟರ್‍ಗಳಿಗೆ ಕೆರೆಯ ಹೊಳನ್ನು ತುಂಬಿಸುತ್ತಿದ್ದಾರೆ. ಈ ಕೆರೆಯಲ್ಲಿ ಮಣ್ಣಿಗಿಂತ ಕಲ್ಲುಗಳು ಹೆಚ್ಚಾಗಿದೆ, ಇವುಗಳನ್ನು ರಸ್ತೆ ನಿರ್ಮಾಣ, ಹಾಳು ಭಾವಿಗಳನ್ನು ಭರ್ತಿ ಮಾಡಲು ಉಪಯೋಗ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿನ ಮಣ್ಣಿನ್ನು ತೆಗೆದುಕೊಂಡು ಹೋಗಲು ಪೈಪೂಟಿ ಇದೆ ನಮ್ಮ ಗ್ರಾಮದವರು ಅಲ್ಲದೆ ನಗರದವರೂ ಸಹಾ ಇದನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ ಎಂದು ಗ್ರಾಮಸ್ಥರಾದ ವಿಶ್ವನಾಥ್ ರೆಡ್ಡಿ ಹೇಳಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ 36 ಕರೆಗಳ ಹೊಳನ್ನು ತೆಗೆಯುವ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮುಂದಾಗಿದೆ. ಇದರಲ್ಲಿ ಈಗಾಗಲೇ 34 ಕರೆಗಳ ಹೊಳನ್ನು ತೆಗೆಯಲಾಗಿದೆ. ಇದಕ್ಕಾಗಿ ಸುಮಾರು 3 ಕೋಟಿ ರೂ.ಗಳನ್ನು ವ್ಯಯ ಮಾಡಲಾಗಿದೆ. ಪ್ರತಿಯೊಂದು ಕೆರೆಗಳಲ್ಲಿಯೂ ಸಹಾ 3 ಅಡಿ ಆಳದಷ್ಟು ಹೊಳನ್ನು ತೆಗೆಯಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ಅಧಿಕಾರಿ ಶ್ರೀಮತಿ ಗೀತಾ ಹೇಳಿದರು.

 

 

 

Share This Article
Leave a Comment

Leave a Reply

Your email address will not be published. Required fields are marked *