ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಫೆ.26) : ಅಲಕ್ಷಿತ ಸಮುದಾಯಗಳ ಬಗ್ಗೆ ದಿವಂಗತ ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಅನೇಕ ಅವಕಾಶಗಳನ್ನು ನೀಡಿದರು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸ್ಮರಿಸಿದರು.
ಕರ್ನಾಟಕ ರಾಜ್ಯ ಅಲಕ್ಷಿತ ಸಮುದಾಯಗಳ ಮಹಾವೇದಿಕೆ, ದೇವರಾಜ ಅರಸು ಜನಸೇವಾ ಪ್ರತಿಷ್ಠಾನ, ರಿದ್ದಿ ಫೌಂಡೇಶನ್ ಚಿತ್ರದುರ್ಗ ಇವುಗಳ ಸಹಯೋಗದೊಂದಿಗೆ ತ.ರಾ.ಸು.ರಂಗ ಮಂದಿರದಲ್ಲಿ ಭಾನುವಾರ ನಡೆದ ಅಲಕ್ಷಿತ ಸಮುದಾಯಗಳ ಸಮಾವೇಶ, ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಗೆ ಕರ್ಪೂರಿ ಠಾಕೂರ್ ಪ್ರಶಸ್ತಿ ಪ್ರದಾನ ಮಾಡಿರುವುದು ನಿಜಕ್ಕೂ ಅತ್ಯಂತ ಸಂತೋಷದ ಸಂಗತಿ. ನಾಯಿಂದ ಜನಾಂಗಕ್ಕೆ ಸೇರಿದ ಕರ್ಪೂರಿ ಠಾಕೂರ್ ತಮ್ಮ ಹೋರಾಟದ ಮೂಲಕ ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ಶಾಸಕ ಟಿ.ರಘುಮೂರ್ತಿ ತಳಸಮುದಾಯಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದಾರೆ. ಕ್ಷೇತ್ರದಲ್ಲಿ ಇನ್ನು ಹೆಚ್ಚು ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲಿ ಎಂದು ಹಾರೈಸಿದರು.
ಕಾಂಗ್ರೆಸ್ ಬ್ರಿಟೀಷರನ್ನು ದೇಶದಿಂದ ತೊಲಗಿಸಲು ಹುಟ್ಟಿಕೊಂಡು ಸಂಘಟನೆ. ಈಗ ಅದು ಪಕ್ಷವಾಗಿ ಬೆಳೆದಿದೆ. ಡಿ.ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಬದಲಾವಣೆಗಳನ್ನು ತಂದು ತಳ ಸಮುದಾಯ, ಶೋಷಿತ ವರ್ಗದವರಿಗೆ ರಾಜಕೀಯವಾಗಿ ಸ್ಥಾನಮಾನಗಳನ್ನು ಕೊಟ್ಟ ಧೀಮಂತ ನಾಯಕ. ಹಾವನೂರು ವರದಿ ನೇಮಿಸಿ ಅಲಕ್ಷಿತ ಸಮುದಾಯಗಳನ್ನು ಗುರಿತಿಸಿ ಸೌಲಭ್ಯಗಳನ್ನು ಕಲ್ಪಿಸಿದರು. ಹಾವನೂರು ವರದಿ ಕೇವಲ ವಾಲ್ಮೀಕಿ ಜನಾಂಗಕ್ಕಷ್ಟೆ ಸೀಮಿತವಲ್ಲ. ಸಣ್ಣ ಸಣ್ಣ ಸಮುದಾಯಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಕರ್ಪೂರಿ ಠಾಕೂರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ರಾಜಕೀಯದಲ್ಲಿ ಒಳ್ಳೆ ಕೆಲಸ ಮಾಡುವಾಗಲೂ ಅನೇಕ ಟೀಕೆ ಟಿಪ್ಪಣಿಗಳು ಎದುರಾಗುತ್ತವೆ. ಎಲ್ಲವನ್ನು ಮೀರಿ ಜನರ ಬಳಿ ಹೋದಾಗ ಮಾತ್ರ ಸಮಾಜ ಗುರುತಿಸಿ ಗೌರವಿಸುತ್ತದೆ. ಈಗಿನ ರಾಜಕೀಯ ಕ್ಷೇತ್ರ ಕೆಸರು ಗದ್ದೆಯಂತಾಗಿದೆ. ಮೌಲ್ಯಗಳಿಗೆ ಹತ್ತಿರವಿರುವವರು ಮಾತ್ರ ರಾಜಕೀಯದಲ್ಲಿ ಎತ್ತರದ ನಾಯಕನಾಗಿ ಬೆಳೆಯಲು ಸಾಧ್ಯ ಎಂದರು.
ರಾಜಕೀಯ, ಸಾಹಿತ್ಯ, ಸಮಾಜ ಸೇವೆ, ಪತ್ರಿಕೋದ್ಯಮ ಸೇರಿದಂತೆ ಅನೇಕ ರಂಗಗಳಲ್ಲಿ ಕರ್ಪೂರಿ ಠಾಕೂರ್ ಪ್ರಶಸ್ತಿಗೆ ಅರ್ಹರಿರುವ ಬಹಳಷ್ಟು ಮಂದಿಯಿದ್ದಾರೆ. ಆದರೆ ಕರ್ನಾಟಕ ರಾಜ್ಯ ಅಲಕ್ಷಿತ ಸಮುದಾಯಗಳ ಮಹಾವೇದಿಕೆ ನನ್ನ ಅಭಿವೃದ್ದಿ ಕೆಲಸಗಳನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಮನಸ್ಸಿಗೆ ಸಮಾಧಾನ ತಂದಿದೆ. ದಲಿತ ಮುಖಂಡ ಎಂ.ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಇವರುಗಳು ತಮ್ಮ ಹೋರಾಟದ ಮೂಲಕ ಇನ್ನು ಜನರ ಮನದಲ್ಲಿ ಉಳಿದಿದ್ದಾರೆ. ನಮ್ಮ ನಡುವೆ ಇವರಿಬ್ಬರು ಇಲ್ಲದಿದ್ದರೂ ಅವರ ಜನಪರ ಕೆಲಸ ಇನ್ನು ಶಾಶ್ವತವಾಗಿ ಉಳಿದಿದೆ ಎಂದು ನೆನಪಿಸಿಕೊಂಡರು.
ಕರ್ಪೂರಿ ಠಾಕೂರ್ ತುಳಿತಕ್ಕೊಳಗಾದ, ಅಲಕ್ಷಿತ ಸಣ್ಣ ಸಣ್ಣ ಸಮುದಾಯಗಳ ಪರ ಹೋರಾಟ ಮಾಡಿದ್ದರಿಂದ ಎರಡು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತು. ರಾಜಕೀಯದಲ್ಲಿ ಚುನಾವಣೆ ಬಂದಾಗ ಒಂದು ಪಕ್ಷದ ಚಿನ್ಹೆ ಮೇಲೆ ಮತ ಕೇಳುವುದು ಅನಿವಾರ್ಯ. ಚುನಾವಣೆಯ ನಂತರ ಎಲ್ಲಾ ಜಾತಿ, ಧರ್ಮದವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜಕಾರಣಿಗಳು ಕೆಲಸ ಮಾಡಬೇಕು. ಪ್ರಸ್ತುತ ರಾಜಕೀಯ ಕ್ಲಿಷ್ಟಕರವಾಗಿದೆ. ಡಿ.ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದಾಗ ಅಲಕ್ಷಿತರ ಪರವಾಗಿದ್ದರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಮಲಿನವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂವಿಧಾನಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷ ಎಪ್ಪತ್ತು ವರ್ಷಗಳ ಕಾಲ ದೇಶದಲ್ಲಿ ಅಧಿಕಾರ ನಡೆಸಿದ ಸಂದರ್ಭದಲ್ಲಿ ಸಣ್ಣ ಸಣ್ಣ ಸಮುದಾಯದವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಸಾಂಸ್ಕøತಿಕ ನಾಯಕರುಗಳ ಜಯಂತಿ ಆಚರಣೆಯಾಗಬೇಕು. ಜನರ ಆಶಯದಂತೆ ರಾಜಕಾರಣಿಗಳು ನಡೆದುಕೊಳ್ಳಬೇಕು. ನೀವುಗಳು ನನ್ನ ಮೇಲೆ ನಿರೀಕ್ಷೆಯಿಟ್ಟು ಕರ್ಪೂರಿ ಠಾಕೂರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದೀರಿ. ಎಲ್ಲಾ ಸಮಾಜದವರಿಗೂ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ಕರ್ನಾಟಕ ರಾಜ್ಯ ಅಲಕ್ಷಿತ ಸಮುದಾಯಗಳ ವೇದಿಕೆಗೆ ಭರವಸೆ ನೀಡಿದರು.
ರಾಜಕೀಯ ವ್ಯವಸ್ಥೆ ಕಠಿಣವಾಗಿದ್ದು, ಜನರ ದಿಕ್ಕುತಪ್ಪಿಸುವ ಕೆಲಸವಾಗುತ್ತಿದೆ. ರಾಜಕಾರಣಿಗಳು ಪ್ರಾಮಾಣಿಕರಾದರೆ ಮತ ನೀಡುವ ಜನರು ಪ್ರಾಮಾಣಿಕವಾಗಿರುತ್ತಾರೆ. ಆಧುನಿಕ ಯುಗದಲ್ಲಿ ಎಲ್ಲಾ ಸೌಲಭ್ಯಗಳು ಕೈಗೆ ಸಿಗುತ್ತಿದೆ. ವಿಷಾದವೆಂದರೆ ಮೌಲ್ಯಗಳು ಕಣ್ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಅಲಕ್ಷಿತ ಸಮುದಾಯಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿ.ತಿಪ್ಪೇಸ್ವಾಮಿ ಸಂಪಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಸಿದ್ದರಾಜು, ಕರ್ನಾಟಕ ರಾಜ್ಯ ಕಾಡುಗೊಲ್ಲ ಬುಡಕಟ್ಟು ಮಹಾಸಭಾದ ರಾಜ್ಯಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಹಿರಿಯ ಪತ್ರಕರ್ತ ಎಂ.ಎಸ್.ಮಣಿ, ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಚಂದ್ರಶೇಖರ್,
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಶಶಿಕಲ ಕಂದಿಕೆರೆ ಸುರೇಶ್‍ಬಾಬು, ಶಾಂತಮ್ಮ, ಅಭಿವೃದ್ದಿ ಪೌಂಡೇಶನ್ ಅಧ್ಯಕ್ಷೆ ಎಂ.ವಿ.ಪವಿತ್ರ ಗಣೇಶ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಎನ್.ಡಿ.ಕುಮಾರ್, ರಿದ್ದಿ ಫೌಂಡೇಶನ್‍ನ ಸಂಸ್ಥಾಪಕಿ ರೇವತಿ, ಅಖಿಲ ಭಾರತ ವಿಶ್ವಕರ್ಮ ಪರಿಷತ್ ಜಿಲ್ಲಾಧ್ಯಕ್ಷ ಎಂ.ಶಂಕರಮೂರ್ತಿ ವಿಶ್ವಕರ್ಮ, ವೀರಭದ್ರಪ್ಪ, ಎನ್.ಬಿ.ಮಹಮದ್ ಮನ್ಸೂರ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.
ಪೊಲೀಸ್ ಅಧಿಕಾರಿ ರೇವತಿರವರ ತಲ್ಲಣಿಸದಿರು ಓ ಮನವೆ ಪುಸ್ತಕ ಇದೇ ಸಂದರ್ಭದಲ್ಲಿ ಬಿಡುಗಡೆಯಾಯಿತು.