ವರದಿ ಮತ್ತು ಫೋಟೋ ಕೃಪೆ : ಸುರೇಶ್ ಬೆಳಗೆರೆ ಮೊ : 97398 75729
ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 04 : ನಗರದ ನಗರಸಭೆ ಕಚೇರಿಯಲ್ಲಿ ಶಾಸಕ ಟಿ ರಘುಮೂರ್ತಿ ನಗರ ಸಭೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿದರು.
ಈ ವೇಳೆ ನಗರಸಭೆ ಸದಸ್ಯರು ಪಕ್ಷಭೇದ ಮರೆತು ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ ಸದಸ್ಯೆ ಜಯ ಲಕ್ಷ್ಮಿ ಕೃಷ್ಣಮೂರ್ತಿ ಮಾತನಾಡಿ ನಾನು ಕಳೆದ ಎರಡು ಸಾಮಾನ್ಯ ಸಭೆಯಲ್ಲಿ ಬೀದಿ ನಾಯಿಗಳ ಹಾವಳಿಯ ಬಗ್ಗೆ ಗಮನ ಸೆಳೆದಿದ್ದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಕನಿಷ್ಠಪಕ್ಷ ಫೋನ್ ಕರೆಯನ್ನು ಸ್ವೀಕರಿಸದೆ ನಿರ್ಲಕ್ಷ ತೋರಿದರು ನನ್ನ ವಾರ್ಡಿನಲ್ಲಿ ಮಕ್ಕಳಿಗೆ ಹುಚ್ಚು ನಾಯಿ ಕಡಿದಿದ್ದರಿಂದ ಸಾರ್ವಜನಿಕರೇ ಅದನ್ನು ಕೊಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು ಈ ಹೇಳಿಕೆಗೆ ವಿ ವೈ ಪ್ರಮೋದ್ ಶ್ರೀನಿವಾಸ್ ವೀರಭದ್ರಪ್ಪ ಸೇರಿದಂತೆ ಹಲವರು ಧ್ವನಿಗೂಡಿಸಿದರು.ಶಾಸಕರು ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿ ಕೂಡಲೆ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಬೇಕು ಎಂದು ಆಜ್ಞೆ ಮಾಡಿದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ತಡೆ: ನಗರ ಸಭೆ ಪೌರಕಾರ್ಮಿಕರು ಹಾಗೂ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಇಲ್ಲಸಲ್ಲದ ಸಭಾಭವುಗಳನ್ನು ಹೇಳಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿದ್ದಾರೆ ಎಂದು ನಗರಸಭೆ ಸದಸ್ಯ ವೀರಭದ್ರಪ್ಪ ಆರೋಪಿಸಿದರು ಇದಕ್ಕೆ ಶಾಸಕರೂ ಇಂತಹ ಜ್ವಲಂತ ಸಮಸ್ಯೆಗಳು ಇಟ್ಟುಕೊಂಡು ಹೇಗೆ ಕಾರ್ಯ ನಿರ್ವಹಿಸುತ್ತಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದರು.
ಬ್ಲೀಚಿಂಗ್ ಪೌಡರ್ ಅಳವಡಿಸಿಲ್ಲ: ನಗರಸಭೆಯ 31 ವಾರ್ಡ್ಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಬ್ಲೇಚಿಂಗ್ ಪೌಡರ್ ಸಹ ಹಾಕದೆ ನಿರ್ಲಕ್ಷ ತರುತ್ತಿರುವುದರಿಂದ ನಗರಸಭೆ ಸದಸ್ಯರು ವಾರ್ಡ್ ಗಳ ಜನರಿಗೆ ಉತ್ತರ ನೀಡಲು ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯೆ ಕವಿತಾ ಸೇರಿದಂತೆ ಇತರೆ ಸದಸ್ಯರು ಆರೋಪಿಸಿದರು ಕನಿಷ್ಠ 15 ದಿನಕ್ಕೊಮ್ಮೆಯಾದರೂ ಬ್ಲೀಚಿಂಗ್ ಪೌಡರ್ ಸಿಂಪಡಿಸಿದರೆ ಉತ್ತಮ ಆದರೆ ಬ್ಲೇಚಿಂಗ್ ಪೌಡರ್ ಲೆಕ್ಕವನ್ನು ಪುಸ್ತಕದಲ್ಲಿ ದಾಖಲಿಸಿ ಚರಂಡಿಗಳಿಗೆ ಹಾಕದೆ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಬಗೆಹರಿಯದ ಈ ಸ್ವತ್ತು ಸಮಸ್ಯೆ: ನಗರಸಭೆಯಲ್ಲಿ ಪ್ರತಿಬಾರಿ ಸಭೆ ನಡೆಸುವಾಗಲು ಈ ಸ್ವತ್ತು ಮಾಡಿ ಕೊಡುತ್ತಿಲ್ಲ ಎಂಬ ದೂರುಗಳು ಸಾಮಾನ್ಯವಾಗಿವೆ ನಗರ ಸಭೆ ಸದಸ್ಯರಿಗೆ ಅಧಿಕಾರಿಗಳು ಈ ಸ್ವತ್ತು ವಿಚಾರದಲ್ಲಿ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಈ ಸ್ವತ್ತು ಗಾಗಿ ಸಾರ್ವಜನಿಕರು ನಗರಸಭೆಗೆ ಓಡಾಡಿ ಚಪ್ಪಲಿ ಸವೆಯುತ್ತಿವೆ ಹೊರತು ಕೆಲಸ ಮಾತ್ರ ಆಗುತ್ತಿಲ್ಲ ಎಂದು ಸದಸ್ಯ ತಿಪ್ಪಮ್ಮ ಆರೋಪಿಸಿದರು ಇದಕ್ಕೆ ಶಾಸಕರು ಧ್ವನಿಗೂಡಿಸಿ ಸಂಬಂಧಪಟ್ಟ ಅಧಿಕಾರಿಗಳು ಈ ಸ್ವತ್ತು ಅರ್ಜಿ ಸ್ವೀಕರಿಸುವಾಗ ಕೂಡಲೇ ಕಂಪ್ಯೂಟರ್ನಲ್ಲಿ ಲಗತಿಸಿ ಏಳು ದಿನಗಳ ಒಳಗೆ ಈ ಸ್ವತ್ತು ನೀಡದಿದ್ದರೆ ಅಂತಹ ಸಿಬ್ಬಂದಿಗಳು ವರ್ಗಾವಣೆಗೊಂಡು ಹೋಗಬಹುದು ಎಂದು ಖಾರವಾಗಿ ನುಡಿದರು.
ಸ್ಮಶಾನಕ್ಕೆ ಜಾಗ ಗುರುತಿಸಿ: ನಗರದ ಬಹುತೇಕ ವಾರ್ಡ್ಗಳಲ್ಲಿ ಸ್ಮಶಾನಗಳ ಸಮಸ್ಯೆ ಉಂಟಾಗುತ್ತಿದ್ದು ನಗರದ ಪಾವಗಡ ರಸ್ತೆಯ ರುದ್ರಭೂಮಿಯಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತಿರುವುದರಿಂದ ನೀರಿನಲ್ಲಿ ಶವಗಳನ್ನು ಹೂಳುವ ಪರಿಸ್ಥಿತಿ ನಿರ್ಮಾಣವಾಗಿದೆ ನಗರದಲ್ಲಿ ಸ್ಮಶಾನಗಳನ್ನು ಒತ್ತುವರಿ ಮಾಡಿಕೊಂಡಿರುವ ವಿರುದ್ಧ ಕ್ರಮ ಕೈಗೊಳ್ಳಬೇಕು ಅಲ್ಲದೆ ನಗರ ವಿಸ್ತಾರವಾಗಿ ಬೆಳೆಯುತ್ತಿರುವುದರಿಂದ ಸ್ಮಶಾನಕ್ಕಾಗಿ ಬೇರೆ ಜಾಗವನ್ನು ಗುರುತಿಸುವುದು ಉತ್ತಮ ಎಂದು ಸದಸ್ಯರು ತಿಳಿಸಿದರು ಇದಕ್ಕೆ ಉತ್ತರಿಸಿದ ಶಾಸಕರು ಆದಷ್ಟು ಬೇಗ ಸ್ಮಶಾನಕ್ಕೆ ಹೊಸ ಜಾಗವನ್ನು ಗುರುತಿಸುವ ಕೆಲಸ ಮಾಡಲಾಗುವುದು ಅಲ್ಲದೆ ಸ್ಮಶಾನಗಳನ್ನು ಹೊತ್ತುವರಿ ಮಾಡಿಕೊಂಡಿದ್ದರೆ ಯಾವುದೇ ಮುಲಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ನಗರ ಸಭೆ ಕಾಂಪ್ಲೆಕ್ಸ್ ಗಳನ್ನು ತೆರವುಗೊಳಿಸಲು ಕ್ರಮ: ನಗರಸಭೆಯ ವ್ಯಾಪ್ತಿಗೆ ಬರುವ ವಾಣಿಜ್ಯ ಮಳಿಗೆಗಳ ಲೀಜ್ ಅವಧಿ ಮುಗಿದಿರುವ ಕಟ್ಟಡಗಳನ್ನು ತೆರವುಗೊಳಿಸಲು ನ್ಯಾಯಾಲಯದ ತಡೆಯಾಗ್ನಿ ಇರುವುದರಿಂದ ಪೌರಾಯುಕ್ತರು ನ್ಯಾಯಾಲಯಕ್ಕೆ ವಕೀಲರ ಮೂಲಕ ಸೂಕ್ತ ದಾಖಲಾತಿಗಳನ್ನು ಹಾಗೂ ಮಾಹಿತಿಯನ್ನು ನೀಡಿ ಪ್ರಕರಣಗಳನ್ನು ಇತ್ಯಾರ್ಥಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಜಗ್ಗರೆಡ್ಡಿ, ಅಧ್ಯಕ್ಷೆ ಜೈತುನ್ ಬೀ, ಉಪಾಧ್ಯಕ್ಷೆ ಸುಜಾತ ಪ್ರಹ್ಲಾದ್, ನಗರಸಭೆ ಸದಸ್ಯರುಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.