ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲೀಗ ಸಚಿವ ಸಂಪುಟ ವಿಸ್ತರಣೆಯದ್ದೇ ಚರ್ಚೆ. ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇದ್ದು, ಪೈಪೋಟಿ ಜೋರಾಗಿ ಶುರುವಾಗಿದೆ. ಈ ಬಗ್ಗೆ ಸಚಿವ ಈಶ್ವರಪ್ಪ ಮಾತನಾಡಿದ್ದು, ನಾಲ್ಕು ಸ್ಥಾನ ಇರೋದಕ್ಕೆ ಈ ರೀತಿಯ ಪೈಪೋಟಿ ಸಹಜ ಎಂದಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮೂರು ತಿಂಗಳು ಬಾಕಿ ಇದೆ. ಈಗ ಸಂಪುಟದಲ್ಲಿ ನಾಲ್ಕು ಸ್ಥಾನವಷ್ಟೇ ಬಾಕಿ ಇದೆ. ರಾಷ್ಟ್ರೀಯ ನಾಯಕರು ಸಂಪುಟ ವಿಸ್ತರಣೆ ಬಗ್ಗೆ ಕೂತು ಮಾತಾಡ್ತಾರೆ. ಯಾರಿಗೆ ಸ್ಥಾನ ಕೊಟ್ಟರೆ ಉತ್ತಮ ಎಂಬುದನ್ನು ಅವರೇ ತೀರ್ಮಾನ ಮಾಡ್ತಾರೆ.
ಜಿಲ್ಲೆ, ರಾಜ್ಯದ ಹಿತ ದೃಷ್ಟಿಯನ್ನು ನೋಡಿ ಈ ಸ್ಥಾನವನ್ನ ತುಂಬ್ತಾರೆ. ಸಚಿವ ಸಂಪುಟದಲ್ಲಿ ಖಾಲಿ ಇದ್ದಾಗ ಆಕಾಂಕ್ಷಿಗಳು ಹುಟ್ಟಿಕೊಳ್ಳೋದು ಸಹಜ. ಎಂಎಲ್ಎ, ಎಂಎಲ್ಸಿ ಗಳು ಕೂಡ ಮಂತ್ರಿ ಆಗ್ಬೇಕು ಅಂತ ಯೋಚಿಸೋದು ತಪ್ಪಲ್ಲ. ಕೇಂದ್ರದ ನಾಯಕರು ಯಾರನ್ನ ಘೋಷಣೆ ಮಾಡ್ತಾರೋ, ಬಿಜೆಪಿ ನಾಯಕರು ಅವರನ್ನ ಒಪ್ಪಿಕೊಳ್ತಾರೆ ಎಂದಿದ್ದಾರೆ.