ಹೊಳಲ್ಕೆರೆ:(ಮೇ.06) ಶಾಸಕ ಎಂ.ಚಂದ್ರಪ್ಪ ತಾನು ಮಾಡದೇ ಇರುವ ಕೆಲಸಗಳನ್ನು ತನ್ನದೆಂದು ಹೇಳಿಕೊಳ್ಳುವ ಸುಳ್ಳುಗಳ ಸರದಾರ ಎಂದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಆರೋಪಿಸಿದರು.

ತಾಲೂಕಿನ ರಾಮಗಿರಿ, ತಾಳಿಕಟ್ಟೆ, ತಾಳಿಕಟ್ಟೆ ಕಾವಲು ಗ್ರಾಮಗಳಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಮತಪ್ರಚಾರದಲ್ಲಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಗಂಗಾ ಕಲ್ಯಾಣ, ಹಾಸ್ಟೇಲ್, ತರಬೇತಿ ಕೇಂದ್ರ, ವಸತಿ ಶಾಲೆಗಳ ನಿರ್ಮಾಣ ಸೇರಿ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿತ್ತು. ಅವೆಲ್ಲವನ್ನು ನಾನು ಮಾಡಿಸಿದ್ದೇನೆ ಎಂದು ಶಾಸಕ ಎಂ.ಚಂದ್ರಪ್ಪ ಸುಳ್ಳಿನ ಸರಮಾಲೆಯನ್ನೆ ಹೆಣೆಯುತ್ತಿದ್ದಾರೆ. ತಾನು ಮಾಡದೇ ಇರುವ ಅಭಿವೃದ್ಧಿ ಕಾರ್ಯಗಳನ್ನು ತನ್ನದೆಂದು ಹೇಳಿಕೊಳ್ಳುವ ದುರಾಭ್ಯಾಸ ಆತನದ್ದು ಎಂದು ಲೇವಡಿ ಮಾಡಿದರು.

ಸಚಿವನಾಗಿದ್ದ ಸಂದರ್ಭ ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ, ಹಳ್ಳಿಗಳಿಗೆ ಭೇಟಿ ನೀಡಿಲ್ಲ ಎಂದು ಹೇಳಿಕೊಂಡು ತಿರುಗುತ್ತಿರುವ ಚಂದ್ರಪ್ಪನಿಗೆ ಜನರೇ ತಕ್ಕ ಉತ್ತರ ನೀಡುತ್ತಿದ್ದಾರೆ ಎಂದರು.
ಬಿಜೆಪಿಯವರಿಗೆ ಕಾಂಗ್ರೆಸನ್ನು ದೂಷಿಸುವ ಯಾವುದೇ ನೈತಿಕತೆಯಿಲ್ಲ. ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಸರ್ವರ ಏಳಿಗೆಗೆ ಶ್ರಮಿಸಿದೆ. ಕಾಂಗ್ರೆಸ್ ಅವಧಿಯಲ್ಲಿ ಭರಮಸಾಗರ ರಸ್ತೆ ಅಗಲೀಕರಣ, ಕೆರೆಗೆ ನೀರು ತರುವುದು ಕ್ಷೇತ್ರದಲ್ಲಿ ಪದವಿ ಕಾಲೇಜುಗಳು ಸೇರಿದಂತೆ ನಾನಾ ಕಾಮಗಾರಿಗಳು ನಡೆದಿದ್ದವು. ಈ ಎಲ್ಲ ಕೆಲಸಗಳನ್ನು ಸಹ ನಾನು ಮಾಡಿದ್ದೇನೆ ಎಂದು ಚಂದ್ರಪ್ಪ ಹೇಳಿಕೊಳ್ಳುತ್ತಿದ್ದಾನೆ. ಕ್ಷೇತ್ರದ ರೈತರಿಗೆ 1500 ಕೊಳವೆಬಾವಿಗಳನ್ನು ಕಾಂಗ್ರೆಸ್ ಅವಧಿಯಲ್ಲಿ ನೀಡಲಾಗಿತ್ತು. ಅದನ್ನು ಸರಿಯಾದ ರೀತಿಯಲ್ಲಿ ವಿತರಣೆ ಮಾಡದೇ ರೈತರಿಗೆ ಮೋಸ ಮಾಡಿದ್ದಾನೆ. ಈ ಬಾರಿ ಚುನಾವಣೆಯಲ್ಲಿ ಮತದಾರರು ಸುಳ್ಳಿನ ಸರದಾರ ಎಂ.ಚಂದ್ರಪ್ಪನಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಬಡ ಮಕ್ಕಳ ವಿದ್ಯಾರ್ಥಿ ವೇತನ, ಹಾಸ್ಟೇಲ್ ಸೌಲಭ್ಯಕ್ಕೆ ಸದ್ದಿಲ್ಲದೆ ನಿಧಾನಗತಿಯಲ್ಲಿ ಕಡಿತ ಮಾಡಲಾಗುತ್ತಿದೆ. ನೊಂದ ಜನರ ಮೇಲೆ ದೌರ್ಜನ್ಯ, ಮಹಿಳೆ-ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿದೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ನಿರುದ್ಯೋಗ ಹೆಚ್ಚಿಸಿದೆ ಎಂದು ಆರೋಪಿಸಿದರಲ್ಲದೇ ಸಿದ್ದರಾಮಯ್ಯ ಅವರ ಅಧಿಕಾರದ ಅವಧಿ ಎಲ್ಲ ವರ್ಗದ ಜನರ ಪಾಲಿಗೆ ಸುವರ್ಣಯುಗವಾಗಿತ್ತು ಎಂದರು.
ಕ್ಷೇತ್ರದ ಜನರು ಶಾಸಕ ಎಂ.ಚಂದ್ರಪ್ಪನಿಗೆ ಕೊಟ್ಟ ಅಧಿಕಾರದಲ್ಲಿ ಉತ್ತಮ ಕೆಲಸವನ್ನು ಮಾಡುವುದನ್ನು ಬಿಟ್ಟು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅವರ, ಜನವಿರೋಧಿ ನೀತಿಗೆ ಬೇಸತ್ತಿರುವ ಜನ ಈ ಬಾರಿ ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಲಿದ್ದಾರೆ ಎಂದರು.
ಶಾಸಕ ಎ.ವಿ.ಉಮಾಪತಿ ಮಾತನಾಡಿ, ಕಾಂಗ್ರೆಸ್ ಪಕ್ಷವು ದೂರದೃಷ್ಠಿಯುಳ್ಳ ಪಕ್ಷ. ದೇಶದಲ್ಲಿ ಕಳೆದ 9 ವರ್ಷಗಳಿಂದ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರ್ಕಾರಿ ಸೌಮ್ಯದ ಕಂಪನಿಗಳನ್ನು ಖಾಸಗೀಕರಣ ಮಾಡುತ್ತಿರುವುದೇ ದೊಡ್ಡ ಸಾಧನೆಯಾದರೆ, ಅಭಿವೃದ್ಧಿ ಮಾತ್ರ ಸಾಧನೆ ಶೂನ್ಯವಾಗಿದೆ ಎಂದು ಆರೋಪಿಸಿದರು.
ಬರೀ ಸುಳ್ಳಿನ ಸರಮಾಲೆಯಿಂದ ಯುವ ಜನರ ಮನಸ್ಸು ಕದಲಿಸುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಇದ್ಯಾವುದಕ್ಕೂ ಅಸ್ವಾದ ನೀಡದೇ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ್, ಕಾಟೀಹಳ್ಳಿ ಶಿವಣ್ಣ, ವದಿಗರೆರಾಜು, ಶೇಖರ್, ರುದ್ರಪ್ಪ, ಎಂ.ಎಸ್.ನಾಗಪ್ಪ, ಅಜ್ಜಯ್ಯ ಮೊದಲಾದರಿದ್ದರು.

