ಚಿತ್ರದುರ್ಗ,(ಆ.30) : ತಾಲ್ಲೂಕಿನ ಲಕ್ಷ್ಮೀಸಾಗರ-ವಿಜಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಸ್ವಚ್ಛತೆ, ಸಿಬ್ಬಂದಿ ಹಾಜರಾತಿ, ಔಷಧ ದಾಸ್ತಾನು ಪರಿಶೀಲಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರವು ಗ್ರಾಮೀಣ ಭಾಗದ ಜನರ ಆರೋಗ್ಯ ಸೇವೆ ಒದಗಿಸಲು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಸಂಜೆ ಸಮಯದಲ್ಲೂ ಸಹ ಸಿಬ್ಬಂದಿಗಳು ಕರ್ತವ್ಯದಲ್ಲಿ ಹಾಜರಿರುವುದನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಯ ಹೊರ ಆವರಣ ಮತ್ತು ಒಳ ಆವರಣಗಳಲ್ಲಿ ಸ್ವಚ್ಛತೆ ಕಾಪಾಡಿರುವುದು, ರೋಗಿಗಳ ಜೊತೆ ಉತ್ತಮ ಸಮಾಲೋಚನೆ ನಡೆಸಿ, ಚಿಕಿತ್ಸೆ ನೀಡುತ್ತಿರುವುದನ್ನು ಗಮನಿಸಿ ವೈದ್ಯಾಧಿಕಾರಿಗಳಿಗೆ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಪ್ರಶಂಸಿದ ಅವರು, ಇದೇ ರೀತಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕರ್ತವ್ಯ ನಿರ್ವಹಿಸಿದರೆ, ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವುದರಲ್ಲಿ ಸಂದೇಹವಿಲ್ಲ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಯಶ್ರೀ ಮಾತನಾಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ಆರ್.ಮೇಘನಾ ಅವರ ಮಾರ್ಗದರ್ಶನದಲ್ಲಿ ಸಮಯ ಪರಿಪಾಲನೆ, ಪರಿಸರ ಸ್ವಚ್ಛತೆ, ಸಿಬ್ಬಂದಿ ಹಾಜರಾತಿ, ಔಷಧಿ ದಾಸ್ತಾನು ಖಾಲಿ ಆಗದಂತೆ ರೋಗಿಗಳಿಗೆ ತೊಂದರೆಯಾಗದಂತೆ ಸೇವೆ ಸಲ್ಲಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪ್ರಯೋಗಶಾಲಾ ತಂತ್ರಜ್ಞ ಶಿವಮೂರ್ತಪ್ಪ, ಶುಶ್ರೂಷಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾತಾಧಿಕಾರಿಗಳು ಸೇರಿದಂತೆ ಮತ್ತಿತರರು ಇದ್ದರು.