ಬಿತ್ತನೆ ಬೀಜ ವಿತರಣೆಗೆ ಶಾಸಕ ಕೆ.ಸಿ.ವೀರೇಂದ್ರ ಚಾಲನೆ

2 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜೂನ್ 19) :  2023ರ ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ ನೀಡಿದರು.

ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಕೃಷಿ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಹಾಗೂ ಬೀಜೋಪಚಾರ, ಸುರಕ್ಷಿತ ಕೀಟನಾಶಕ ಬಳಕೆ ಕುರಿತ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರ ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದು, ಯಾವುದೇ ಕೊರತೆ ಇರುವುದಿಲ್ಲ. ಪ್ರಸಕ್ತ ವರ್ಷ ಶೇ.10ರಷ್ಟು ಹೆಚ್ಚಿನ ಮಳೆಯಾಗಲಿದ್ದು, ಉತ್ತಮ ಬೆಳೆ ಬರುವ ನಿರೀಕ್ಷೆ ಇದೆ ಎಂದರು.

 

ರಸಗೊಬ್ಬರ ಸಮಸ್ಯೆ ಬಗೆಹರಿಸಲು ಚಿತ್ರದುರ್ಗದಲ್ಲಿ ರೈಲಿನ ರೇಕ್ ಪಾಯಿಂಟ್ ಮಾಡಿಸಲು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಕ್ರಮವಹಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅನುಷ್ಠಾನ ಕುರಿತು ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಜತೆ ಈಗಾಗಲೇ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್ ಕುಮಾರ್ ಮಾತನಾಡಿ, ಚಿತ್ರದುರ್ಗ ತಾಲ್ಲೂಕಿನಲ್ಲಿ ಈವರೆಗೆ ವಾಡಿಕೆ ಮಳೆಗಿಂತ ಶೇ.62ರಷ್ಟು ಮಳೆ ಕೊರತೆಯಿದ್ದು, ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರಕಾರ ಇನ್ನೇರೆಡು ದಿನಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ಉಚಿತವಾಗಿ ರಾಗಿ ಬಿತ್ತನೆ ಬೀಜ ಮಿನಿಕಿಟ್ ಗಳನ್ನು ಶಾಸಕರು ವಿತರಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು  ಕೃಷಿಕ ಸಮಾಜದ ಅಧ್ಯಕ್ಷ ಜಗದೀಶ್, ನಗರಸಭೆ ಅಧ್ಯಕ್ಷ ಮಂಜುನಾಥ, ಸದಸ್ಯ ಮಲ್ಲಿಕಾರ್ಜುನ, ಉಪ ಕೃಷಿ ನಿರ್ದೇಶಕ ಬಿ.ಎನ್.ಪ್ರಭಾಕರ್, ಸಹಾಯಕ ಕೃಷಿ ನಿರ್ದೇಶಕ ಎನ್. ಚಂದ್ರಕುಮಾರ್, ಹಿರಿಯೂರು ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಪ್ರವೀಣ್ ಚೌಧರಿ, ಜಾರಿದಳ ಸಹಾಯಕ ಕೃಷಿ ನಿರ್ದೇಶಕ ಲೋಕೇಶಪ್ಪ, ಕಸಬ ಹೋಬಳಿ ಕೃಷಿ ಅಧಿಕಾರಿ ಆಶಾರಾಣಿ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *