ಬೆಂಗಳೂರು; ಬೆಳಗ್ಗೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಒಂದೇ ವಿಡಿಯೋ ವೈರಲ್ ಆಗ್ತಾ ಇರೋದು. ಅದು ವಸಗಿ ಯೋಜನೆ ವಿಚಾರಕ್ಕೆ ಶಾಸಕ ಬಿ ಆರ್ ಪಾಟೀಲ್ ಅವರು ಮಾತನಾಡಿರುವ ಆಡಿಯೋ. ಹಣ ಕೊಟ್ಟವರಿಗೆ ಮಾತ್ರ ವಸತಿಗಳು ಸಿಗುತ್ತವಾ ಎಂಬ ಮಾತುಗಳು. ಕಾಂಗ್ರೆಸ್ ಪಕ್ಷದವರೇ ಮಾತನಾಡಿದ ಕಾರಣ, ಸಾಮಾನ್ಯ ಜನರಿಗೂ ಇದು ಹೌದಾ ಎನಿಸಿದೆ. ಹಲವು ಪ್ರಶ್ನೆಗಳು ಕಾಡುವುದಕ್ಕೆ ಶುರುವಾಗಿದೆ. ಈ ಆಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಈ ಸಂಬಂಧ ಈಗಾಗಲೇ ಹೈಕಮಾಂಡ್ ವರದಿ ಕೇಳಿದೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ವಸತಿ ಇಲಾಖೆಯ ವಿರುದ್ಧ ಆರೋಪದ ಸಂಬಂಧ ಮಾಹಿತಿಯನ್ನ ಕೇಳಿದ್ದಾರೆ. ಅಷ್ಟೇ ಅಲ್ಲ ಶಾಸಕ ಬಿ.ಆರ್.ಪಾಟೀಲ್ ಬಗ್ಗೆಯೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ವಿಚಾರವನ್ನು ಪಕ್ಷದ ಗಮನಕ್ಕೆ ತರದೆ ಸಾರ್ವಜನಿಕ ವಲಯದಲ್ಲಿ ಹರಿಬಿಟ್ಟಿದ್ದಕ್ಕೆ ಬೇಸರ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಬಿ ಆರ್ ಪಾಟೀಲ್ ಆರೋಪದಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ. ವಿರೋಧ ಪಕ್ಷಗಳಿಗೆ ಇದೊಂದು ರಾಜಕೀಯ ಅಸ್ತ್ರವಾಗಿದೆ. ಬಿ.ಆರ್.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು, “ಬಿಆರ್ ಪಾಟೀಲ್ ಹೇಳಿದ್ದು ನೂರಕ್ಕೆ ನೂರು ಸತ್ಯ. ಹಣ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ನುಡಿದರು. ಬಡವರು ಮನೆ ಬೇಕೆಂದರೂ ದುಡ್ಡು ಕೊಟ್ಟು ತೆಗೆದುಕೊಳ್ಳಬೇಕಾಗಿದೆ. ಸರಕಾರ ತಪ್ಪನ್ನು ಒಪ್ಪಿಕೊಂಡು ಅದನ್ನು ಸರಿಪಡಿಸಿ ಬಡವರಿಗೆ ನ್ಯಾಯ ಒದಗಿಸಿಕೊಡಲಿ”ಎಂದು ಆಗ್ರಹಿಸಿದರು.






