ಚಿತ್ರದುರ್ಗ: ಮೇಕೆದಾಟು ಯೋಜನೆಗೆ ಆಗ್ರಹಿಸಿ, ಕಾಂಗ್ರೆಸ್ ನಾಯಕರು ಜನವರಿ 7 ರಂದು ಮೇಕದಾಟುವಿನಿಂದ ಫ್ರೀಡಂ ಪಾರ್ಕ್ ತನಕ ಪಾದಯಾತ್ರೆ ಹಮ್ಮಿಕೊಂಡಿದ್ದರು. ಆದ್ರೆ ಇದೀಗ ಕೊರೊನಾ ಟಫ್ ರೂಲ್ಸ್ ಜಾರಿಗೆ ತಂದಿರುವ ಕಾರಣ ಪಾದಯಾತ್ರೆ ಬದಲು, ಅವಕಾಶ ಇರುವ ವಷ್ಟು ಜನ ನಡಿಗೆ ಮಾಡಲು ನಿರ್ಧರಿಸಿದ್ದಾರೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರಾಣ ಹೋದರು ಸರಿ ಹೋರಾಟ ಬಿಡಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಟಾಂಗ್ ಕೊಟ್ಟಿರುವ ಸಚಿವ ಗೋವಿಂದ ಕಾರಜೋಳ, ಎಲ್ಲರಿಗೂ ಹೋರಾಟ ಮಾಡುವ ಹಕ್ಕು ಇರುತ್ತೆ. ಪ್ರಾಣ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ, ಸಚಿವ ಗೋವಿಂದ ಕಾರಜೋಳ, ಕಾಂಗ್ರೆಸ್ 2013ರಿಂದ 18ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದೆ. ಆಗ ನೀರಾವರಿ ಯೋಜನೆ ಬಗ್ಗೆ ಗಮನಹರಿಸದೆ ಕುಂಭಕರ್ಣ ನಿದ್ದೆ ಮಾಡಿದೆ.
ಕಾಂಗ್ರೆಸ್ ಮೇಕೆದಾಟು ಹೋರಾಟ ಇದೊಂದು ರಾಜಕೀಯ ಗಿಮಿಕ್ ರೀತಿ ಇದೆ. ತಮಿಳುನಾಡಿನಲ್ಲಿ ಡಿಎಂಕೆ ಜತೆ ಸೇರಿ ಕಾಂಗ್ರೆಸ್ ಸರ್ಕಾರ ರಚಿಸಿದೆ. ತಮಿಳುನಾಡು ಕ್ಯಾತೆ ತೆಗೆಯದಂತೆ ಸಿದ್ಧರಾಮಯ್ಯ ಬುದ್ದಿ ಹೇಳಲಿ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಊರ ಹೊರಗಡೆ ಇದ್ದಾನೆ. ಅಣ್ಣಾಮಲೈ ಸರ್ಕಾರದಲ್ಲಿಲ್ಲ, ಚುನಾಯಿತ ಪ್ರತಿನಿಧಿ ಅಲ್ಲ.
ಸಿದ್ಧರಾಮಯ್ಯ, ಡಿಎಂಕೆ ಸೇರಿ ಸಹಕರಿಸಿ ಕರ್ನಾಟಕಕ್ಕೆ ಉಪಕರಿಸಲಿ. ಮೇಕೆದಾಟು ಹೋರಾಟಕ್ಕೆ ಇಬ್ಬರಾದರೂ ಹೋಗಲಿ, ಇನ್ನೂರು ಜನರಾದರೂ ಹೋಗಲಿ. ಕಾಂಗ್ರೆಸ್ ನವರಿಂದ ಭ್ರಮೆ ಹುಟ್ಟಿಸಿ ಜನರಿಗೆ ಮೋಸ. ಕಾಂಗ್ರೆಸ್ ಹೊಣೆಗೇಡಿತನದಿಂದ ರಾಜ್ಯದ ಯೋಜನೆಗಳು ಪ್ರಗತಿ ಕುಂಠಿತ. ಸಿದ್ಧರಾಮಯ್ಯ, ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.