ಬೆಳಗಾವಿ: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಮುಸ್ಲಿಂ ವಿರುದ್ಧ ಕೆಲ ಹಿಂದೂಪರ ಸಂಘಟನೆಗಳು ಹರಿಹಾಯುತ್ತಿದ್ದಾರೆ. ಈ ಎಲ್ಲಾ ಘಟನೆಗಳ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ ಅಸಮಾಧಾನ ಹೊರ ಹಾಕಿದ್ದಾರೆ.
ಈ ರೀತಿಯ ಬೆಳವಣಿಗೆಗಳು ಆಡಳಿತ ಪಕ್ಷಕ್ಕೆ ಗೌರವ ತರುವಂತದ್ದಲ್ಲ. ಯಾರಿಗೋ ತೊಂದರೆ ಕೊಡುವುದು, ಶಾಂತಿ ಕದಡುವುದನ್ನು ಮಾಡುವುದು ಗೌರವ ತರುವುದಿಲ್ಲ. ಆಡಳಿತ ಮಾಡಬೇಕು ಎಂದರೆ ಎಲ್ಲರೂ ಈ ದೇಶದ ಪ್ರಜೆಗಳು ಒಂದೇ ಎಂದು ಭಾವಿಸಬೇಕು. ಆಕಸ್ಮಿಕವಾಗಿ ನಡೆಯುವುದು ಬೇರೆ. ಆದರೆ ಹುಡುಕಿಕೊಂಡು ಹೋಗುವುದನ್ನು ಯಾರು ಒಪ್ಪುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ಬೆಂಗಳೂರಿನಲ್ಲಿ ನಡೆದ ಚಂದ್ರು ಕೊಲೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಗೃಹ ಮಂತ್ರಿಗಳಿಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಗೃಹ ಸಚಿವರು ತಕ್ಷಣ ರಿಯಾಕ್ಟ್ ಮಾಡಿದ್ದು, ಗೊಂದಲಕ್ಕೆ ಕಾರಣವಾಗಿದೆ. ಸಮಾಧಾನವಾಗಿ ಯೋಚಿಸಿ ಉತ್ತರಿಸಬೇಕು. ಶಾಂತಿ ಇರುವ ಕಡೆ ಅಭಿವೃದ್ಧಿಗೆ ಬೆಲೆ ಜಾಸ್ತಿ. ಶಾಂತಿ ಕದಡಿದರೆ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.