ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಈಗ ಮತ್ತೆ ನವೆಂಬರ್ ಕ್ರಾಂತಿ ಜೋರಾಗಿದೆ. ಸಿಎಂ ಬದಲಾವಣೆ ಆಗಬಹುದು ಎಂಬ ಮಾತುಗಳು ಮತ್ತೆ ಸದ್ದು ಮಾಡ್ತಿವೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಅವರು ಡಿನ್ನರ್ ಮೀಟಿಂಗ್ ಕೂಡ ಕರೆದಿದ್ದಾರೆ. ಈ ಮೀಟಿಂಗ್ ಸಂಬಂಧ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ಮೂರು ತಿಂಗಳಿಗೋ ಆರು ತಿಂಗಳಿಗೋ ನಡೀತಾ ಇರುತ್ತೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ಏನಿರುತ್ತೆ ಅದೆಲ್ಲಾ ಚರ್ಚೆ ಆಗುತ್ತೆ. ನವೆಂಬರ್ ಕ್ರಾಂತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಡಿನ್ನರ್ ಮೀಟಿಂಗ್ ನಲ್ಲಿ ರಾಜಕೀಯವಿಲ್ಲ. 138 ಜನವೂ ಮಂತ್ರಿಯಾಗಬೇಕು ಅಂತಾರೆ. 34 ಜನ ಆಗಿದ್ದಾರೆ. ಇನ್ನಷ್ಟು ಜನ ಆಸೆ ಇರುವವರಿಗೆ ಸರ್ಕಾರ ಏನಾದ್ರೂ ಕೊಡಬೇಕು ಅಲ್ವಾ. ಎಷ್ಟು ಜನರನ್ನ ತೆಗೆಯುತ್ತಾರೆ ಎಂಬುದು ಮುಖ್ಯಮಂತ್ರಿ ಅವರಿಗೆ ಬಿಟ್ಟದ್ದು ಎಂದಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಈ ಮುಂಗಾರು ಸಮಯದಲ್ಲಿ ಮಳೆಯಿಂದ ಹಾನಿಯಾಗಿರುವುದು ಇದು ಮೊದಲ ಬಾರಿ. ಸಿಡಿಎಸ್ ನಾಲೆ ಬಳಿ ಹೆಚ್ಚು ನೀರು ಬಂದಾಗ ಪೈಪ್ ಒಡೆದಿದೆ. ಅದರ ಕೆಳಗಡೆ ಅಚ್ಚಕಟ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಜಾಯಿಂಟ್ ಸರ್ವೇ ಮುಗಿದ ಮೇಲೆ ಒಂದೆರಡು ದಿನ ಬೇಕಾಗುತ್ತದೆ. ಮಳೆ ಪ್ರತಿ ದಿನ ಬರ್ತಾ ಇರೋದರಿಂದ ನಮಗೆ ಗೊತ್ತಾಗ್ತಾ ಇಲ್ಲ. ಮಾಡಿದ ಮೇಲೆ ಹಾನಿಯಾದ ಲೆಕ್ಕ ಸಿಗುತ್ತೆ.
ಇದಕ್ಕೆ ಟೈಮ್ ಲೈನ್ ಅಂತ ಏನಿಲ್ಲ. ಯಾವತ್ತು ಸರ್ವೇ ಮುಗಿಯುತ್ತೆ ಅವತ್ತೆ ವರದಿ ಒಪ್ಪಿಸಿದರೆ, ಪರಿಹಾರವನ್ನು ನೀಡುವುದಕ್ಕೆ ಹೇಳ್ತೇವೆ. ಈಗಾಗಲೇ ಸರ್ಕಾರ ಎನ್ಡಿಆರ್ಎಫ್ ನಲ್ಲಿ ಮಳೆಯಾಶ್ರಿತ ಬೆಳೆಗೆ 8,500 ಕೊಟ್ಟಿದೆ. ನೀರಾವರಿಗೆ 17 ಸಾವಿರ ಬಹು ವಾರ್ಷಿಕ ತೋಟಗಾರಿಕೆಗೆ 22,500 ಕೊಡ್ತಾ ಇದ್ವಿ. ಆದ್ರೆ ಈಗ ಬೀದರ್, ಗುಲ್ಬರ್ಗ, ರಾಯಚೂರು ಸೇರಿದಂತೆ ಹಲವು ಭಾಗಗಳಲ್ಲಿ ಬೆಳೆ ಹಾನಿ ಜಾಸ್ತಿಯಾಗಿದೆ. ಹೀಗಾಗಿ ಎಲ್ಲಾ ರೀತಿಯಲ್ಲೂ ಚರ್ಚೆ ಮಾಡಿ, ಆ ಭಾಗದ ರೈತರು ಏನು ಹೇಳಿದ್ರು ಅಷ್ಟನ್ನೇ ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.






