ಬೆಂಗಳೂರು: ರಾಮನಗರದಲ್ಲಿ ಸಂಸದ ಸುರೇಶ್ ಹಾಗೂ ಸಚಿವ ಅಶ್ವಥ್ ನಾರಾಯಣ್ ನಡುವೆ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರಕ್ಕೂ ಅಶ್ವಥ್ ನಾರಾಯಣ್ ಗೂ ಏನು ಸಂಬಂಧವೆಂದು ಡಿಕೆಶಿ ಪ್ರಶ್ನಿಸಿದ್ದರು. ಇದೀಗ ಆ ಪ್ರಶ್ನೆಗೆ ಸಚಿವ ಅಶ್ವಥ್ ನಾರಾಯಣ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
ಮಿಸ್ಟರ್ ಡಿಕೆ ಶಿವಕುಮಾರ್ ಗೂಂಡಾಗಿರಿ ಬಿಡಿ. ನನಗೂ ರಾಮನಗರಕ್ಕೂ ಏನು ಸಂಬಂಧ ಎಂದು ಕೇಳಿದ್ದೀರಿ. ನನ್ನ ಪೂರ್ಣ ಹೆಸರನ್ನ ನಿಮಗೆ ನೆನಪಿಸಬೇಕಿದೆ. ಚಿಕ್ಕಕಲ್ಯ ನಾರಾಯಣಪ್ಪ ಅಶ್ವಥ್ ನಾರಾಯಣ್. ಮೊದಲು ಗೂಂಡಾವರ್ತನೆ ಬಿಡಿ. ವೇದಿಕೆ ಮೇಲೆ ಮಾತಾಡಿದ ಮಾತಿಗೆ ವೇದಿಕೆಯಲ್ಲೇ ಉತ್ತರ ಕೊಡಬೇಕಿತ್ತು. ಕುಂಬಳಕಾಯಿ ಅಂಧರೆ ಹೆಗಲು ಮುಟ್ಟಿ ನೋಡಿಕೊಂಡಂತಾಯ್ತು.
ಗೂಂಡಾ ವರ್ತನೆ ಹಾಗೂ ಅದನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡ ರೀತಿ ಕಾಂಗ್ರೆಸ್ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ರೀತಿಯ ಪುಂಡಾಟಿಕೆ ಡಿಕೆ ಬ್ರದರ್ಸ್‌ಗಳು ಕಲಿತು ಬಂದ ಕಲೆ. ಈ ಭಾಗದ ಪ್ರನಿಧಿಗಳಾಗಿ ಕೇವಲ ಭಾಷಣ ಮಾಡುವುದರಲ್ಲೇ ಕಾಲ ಕಳೆದಿದ್ದಾರೆ. ಆದ್ರೆ ನಮ್ಮ ಸರ್ಕಾರ ಅಭಿವೃದ್ಧಿ ಕೆಲಸಗಳನ್ನ ಮಾಡಿದೆ. ರಾಮನಗರದಲ್ಲಿ ನಮ್ಮ ಸರ್ಕಾರ ಮಾಡಿರುವ ಜನಪರ ಕೆಲಸಗಳ ಬಗ್ಗೆ ಮಾತನಾಡಿದ್ದೇನೆ ಎಂದಿದ್ದಾರೆ.