ಚಿತ್ರದುರ್ಗ, (ಜನವರಿ.01): ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಖರೀದಿ ಮತ್ತು ನೋಂದಣಿ ಕೇಂದ್ರಕ್ಕೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಶನಿವಾರ ಚಾಲನೆ ನೀಡಿದರು.
ನಗರದ ಎಪಿಎಂಸಿ ಯಾರ್ಡ್‍ನಲ್ಲಿರುವ ರೈತಭವನದಲ್ಲಿ ಜಿಲ್ಲಾಡಳಿತ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ವತಿಯಿಂದ ಹಮ್ಮಿಕೊಂಡಿದ್ದ 2021-22ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಖರೀದಿ ಮತ್ತು ನೋಂದಣಿ ಕೇಂದ್ರಗಳ ಉದ್ಘಾಟಿಸಿ ಮಾತನಾಡಿದ ಅವರು, ರಾಗಿ ಖರೀದಿ ಕೇಂದ್ರಕ್ಕೆ ಬಹಳಷ್ಟು ಬೇಡಿಕೆ ಇರುವ ಕಾರಣ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ರಾಗಿ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ನವೆಂಬರ್ ಮತ್ತು ಡಿಸೆಂಬರ್‍ನಲ್ಲಿ ಬಹಳಷ್ಟು ಬೆಳೆಗಳಿಗೆ ಹಾನಿಯಾಯಿತು. ಬೆಳೆಹಾನಿಗೆ ಸಂಬಂಧಿಸಿದಂತೆ ತಕ್ಷಣವೇ ಒಂದು ತಿಂಗಳೊಳಗೆ ಜಿಲ್ಲೆಯ ರೈತರಿಗೆ ನೇರವಾಗಿ ರೂ.61 ಕೋಟಿ ಬೆಳೆಹಾನಿ ಪರಿಹಾರ ನೀಡಲಾಗಿದೆ. ಇದರ ಜೊತೆಗೆ ರೈತರ ಹಿತ ರಕ್ಷಣೆ ಕಾಪಾಡುವ ದೃಷ್ಠಿಯಿಂದ ಸರ್ಕಾರ ರೈತರಿಂದ ರಾಗಿ ಖರೀದಿಸಿ ರೈತರ ನೆರವಿಗೆ ಧಾವಿಸಿದೆ ಎಂದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಯಡಿ 2021-22ನೇ ಸಾಲಿನಲ್ಲಿ ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿಸಲಾಗುವುದು. ರೈತರ ರಾಗಿ ಖರೀದಿ ನೋಂದಣಿ ಕಾರ್ಯವನ್ನು ಜನವರಿ 01 ರಿಂದ ಪ್ರಾರಂಭಿಸಿ, ಜನವರಿ 30 ರವರೆಗೆ ಮಾಡಲಾಗುವುದು. ರಾಗಿ ಖರೀದಿ ಕಾರ್ಯವನ್ನು ಜನವರಿ 01 ರಿಂದ ಪ್ರಾರಂಭಿಸಿ ಮಾರ್ಚ್ 31ಕ್ಕೆ ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದರು.
ರೈತರು ನೋಂದಣಿಯನ್ನು ಮಾಡಿಸಲು ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ಸ್ ಗುರುತಿನ ಸಂಖ್ಯೆಯನ್ನು ತರುವುದು ಕಡ್ಡಾಯವಾಗಿರುತ್ತದೆ. ರೈತರು ನೋಂದಣಿ ಮಾಡಿಸಲು ಅವರಿಗೆ ಕೃಷಿ ಇಲಾಖೆಯಿಂದ ನೀಡಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಯ ಮಾಹಿತಿ ವ್ಯವಸ್ಥೆ (ಫ್ರೂಟ್ಸ್) ಗುರುತಿನ ಸಂಖ್ಯೆಯೊಂದಿಗೆ ಖರೀದಿ ಕೇಂದ್ರಕ್ಕೆ ಬಂದು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಫ್ರೂಟ್ಸ್ ಐಡಿ ಇಲ್ಲದ ರೈತರ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಇರುವುದಿಲ್ಲ. ಹಾಗೂ ರೈತರು ಬೇರಾವುದೇ ದಾಖಲೆಗಳನ್ನು ತುರವ ಅಗತ್ಯವಿರುವುದಿಲ್ಲ ಎಂದರು.
ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಪ್ರತಿ ಎಕೆರೆಗೆ 10 ಕ್ವಿಂಟಾಲ್‍ನಂತೆ ಗರಿಷ್ಟ 20 ಕ್ವಿಂಟಾಲ್ ರಾಗಿ ಖರೀದಿಸಲಾಗುವುದು. ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ರಾಗಿಯನ್ನು ಪ್ರತಿ ಕ್ವಿಂಟಾಲ್‍ಗೆ ರೂ.3377/- ರಂತೆ ಖರೀದಿಸಲಾಗುವುದು. ಪ್ರತಿ ಯೋಗ್ಯವಾದ ಚೀಲಕ್ಕೆ ರೂ.22/-ಗಳನ್ನು ನೀಡಲಾಗುವುದು ಎಂದರು.
ರೈತರಿಗೆ ರಾಗಿ ಮಾರಾಟದ ಮೊತ್ತವನ್ನು ಫ್ರೂಟ್ಸ್ ತಂತ್ರಾಂಶದ ಡಿಬಿಟಿ ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾನ ಕಡ್ಡಾಯವಾಗಿ ಮಾಡಿಸುವುದು. ಪೂರ್ಣ ಒಣಗಿದ ಹಾಗೂ ಸ್ವಚ್ಛಗೊಳಿಸಿದ ಉತ್ತಮ ಗುಣಮಟ್ಟದ ಮತ್ತು ಗ್ರೇಡರ್‍ಗಳಿಂದ ದೃಢೀಕರಿಸಿದ ಗುಣಮಟ್ಟದ ರಾಗಿಯನ್ನು ಖರೀದಿಸಲಾಗುವುದು. ಕಳಪೆ ಗುಣಮಟ್ಟದ ರಾಗಿಯನ್ನು ತಿರಸ್ಕರಿಸಲಾಗುವುದು ಎಂದು ಹೇಳಿದರು.
ಬಯಲುಸೀಮೆ ಪ್ರದೇಶದಲ್ಲಿ ರಾಗಿ, ಜೋಳ, ನವಣೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಬೆಳೆಗಳಿಗೆ ಫ್ರೋತ್ಸಾಹ ಕೊಡುವ ದೃಷ್ಠಿಯಿಂದ ರಾಗಿ ಬೆಳೆಗೆ ಎಲ್ಲ ಬೆಳೆಗಿಂತ ಹೆಚ್ಚಿನ ಬೆಂಬಲ ಬೆಲೆನೀಡಿ ರಾಗಿ ಖರೀದಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಜಿಲ್ಲಾ ವ್ಯವಸ್ಥಾಪಕ ಕೆ.ಆರ್.ಶಿವಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ರೈತ ಮುಖಂಡರಾದ ಬಸ್ತಿಹಳ್ಳಿ ಸುರೇಶಬಾಬು, ಧನಂಜಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.