ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಮೇ.20): ಮೇರೆ ಲೈಫ್ ಮೇರೆ ಸ್ವಚ್ಚ ಶೆಹರ್, ನನ್ನ ಲೈಫ್ ನನ್ನ ಸ್ವಚ್ಚ ನಗರ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ನಗರಸಭೆ ಆವರಣದಲ್ಲಿ ಪೌರ ಕಾರ್ಮಿಕ ಶಿವಕುಮಾರ್ ಟೇಪ್ ಕತ್ತರಿಸುವ ಮೂಲಕ ಶನಿವಾರ ಕೇಂದ್ರವನ್ನು ಉದ್ಘಾಟಿಸಿದರು.
ಪರಿಸರ ಇಂಜಿನಿಯರ್ ಜಾಫರ್ ಮಾತನಾಡಿ ಮೇ 20 ರಿಂದ ಜೂ. 5 ರವರೆಗೆ ಕಾರ್ಯನಿರ್ವಹಿಸಲಿದ್ದು, ನ್ಯೂ ಸಂತೆಮೈದಾನ, ಜೋಗಿಮಟ್ಟಿ ರಸ್ತೆ ಎಂಟನೆ ಕ್ರಾಸ್, ಐಸಿರಿ ಬಾರ್ ಮುಂಭಾಗ, ನೆಹರು ನಗರ ಒಂದನೆ ಕ್ರಾಸ್, ಆಶ್ರಯ ಬಡಾವಣೆ, ನಗರಸಭೆಯಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸ್ಟೀಲ್ ತಟ್ಟೆ, ಲೋಟಗಳನ್ನು ಎಲ್ಲರೂ ಬಳಸುವುದರಿಂದ ಪ್ಲಾಸ್ಟಿಕ್ ಐಟಂಗಳ ಉಪಯೋಗ ಕಡಿಮೆ ಮಾಡುವುದು, ಬಳಸಿದ ವಸ್ತುಗಳನ್ನು ಹೊರೆಗೆ ಎಸೆಯದೆ ಮರು ಬಳಸುವುದು ಇದರ ಉದ್ದೇಶ. ಪ್ಲಾಸ್ಟಿಕ್ ಬಾಟಲ್ ಹಾಗೂ ಇನ್ನಿತರೆ ವಸ್ತುಗಳನ್ನು ಬಳಸಿ ಬಿಸಾಡಿ ಪರಿಸರಕ್ಕೆ ಧಕ್ಕೆ ತರುವ ಬದಲು ಅನೇಕ ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು.
ನಮ್ಮ ಕೇಂದ್ರಕ್ಕೆ ಹಳೆ ಬಟ್ಟೆ, ಆಟಿಕೆ ಸಾಮಾನು, ಹಳೆ ಪುಸ್ತಕಗಳನ್ನು ಕೊಟ್ಟರೆ ಬೇರೆ ಯಾರಾದರೂ ಬಡವರಿಗೆ ವಿತರಿಸುತ್ತೇವೆ. ದಿನನಿತ್ಯ ಬೆಳಿಗ್ಗೆ ಮನೆ ಮನೆಗೆ ಬರುವ ನಗರಸಭೆ ಕಸ ಸಂಗ್ರಹ ವಾಹನದವರಿಗಾದರೂ ಕೊಡಬಹುದು.
ಕೆಲವರು ತಮ್ಮ ಮನೆಗಳಲ್ಲಿರುವ ದಿನಪತ್ರಿಕೆಗಳನ್ನು ನೀಡಬಹುದು. ಒಟ್ಟಾರೆ ನಗರವನ್ನು ತ್ಯಾಜ್ಯಮುಕ್ತವನ್ನಾಗಿಸಿ ಸುಂದರವಾಗಿಡುವುದು ಈ ಯೋಜನೆಯ ಉದ್ದೇಶ ಎಂದು ಹೇಳಿದರು.
ಹೆಲ್ತ್ ಇನ್ಸ್ಪೆಕ್ಟರ್ ಗಳಾದ ಸರಳ, ಭಾರತಿ, ಕಂದಾಯ ನಿರೀಕ್ಷಕರು, ಚಿಂದಿ ಹಾಯುವವರು ಈ ಸಂದರ್ಭದಲ್ಲಿದ್ದರು.