ಚಿತ್ರದುರ್ಗ,(ಅಕ್ಟೋಬರ್10) : ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವು ಮುಖ್ಯವಾಗಿದ್ದು, ಇದು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಹೇಳಿದರು.
ನಗರದ ವೆಂಕಟೇಶ್ವರ ಬಡಾವಣೆಯಲ್ಲಿ ಸೋಮವಾರ ಆರೋಗ್ಯ ಇಲಾಖೆ, ಹಸಿರು ದಳ ಸಂಸ್ಥೆ ಸಹಯೋಗದೊಂದಿಗೆ ಚಿಂದಿ ಹಾಯುವ ಅಲೆಮಾರಿ ಜನರಿಗೆ ಆರೋಗ್ಯ ತಪಾಸಣೆ ಮತ್ತು ವಿಶ್ವ ಮಾನಸಿಕ ದಿನದ ಬಗ್ಗೆ ಮಾಹಿತಿ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾಗತಿಕವಾಗಿ 792 ಮಿಲಿಯನ್ ಜನರು ಮಾನಸಿಕ ಅಸ್ವಸ್ವತೆಗಳೊಂದಿಗೆ ವಾಸಿಸುತ್ತಿದ್ದಾರೆ. ಶೇ.10ರಷ್ಟು ಜನರು ಜನರು ಸಾಮಾನ್ಯ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಶೇ.1ರಷ್ಟು ಜನಸಂಖ್ಯೆಯು ತೀವ್ರತರದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ನಿಟ್ಟಿನಲ್ಲಿ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಮಾನಸಿಕ ಆರೋಗ್ಯದ ಬಗ್ಗೆ ನಮ್ಮ ತಿಳುವಳಿಕೆ ಬೆಳೆದಂತೆ, ನಾವು ಅದರೊಂದಿಗೆ ಬೆಳೆಯುತ್ತೇವೆ. ನಮ್ಮ ಸ್ವಯಂ-ಅರಿವು ಮತ್ತು ಅದರ ಬಗೆಗಿನ ಸೂಕ್ಷ್ಮತೆ ಹಾಗೂ ವ್ಯಕ್ತಿತ್ವವನ್ನು ಸುಂದರವಾಗಿ ಬದಲಾಯಿಸುತ್ತದೆ. ನಾವು ಬಹಳಷ್ಟು ಕಲಿತಿದ್ದರೂ, ಸಾಮಾಜಿಕವಾಗಿ ವಿಕಸನಗೊಳ್ಳಲು ನಾವು ಇನ್ನೂ ಹೆಚ್ಚಿನದನ್ನು ಅಳವಡಿಸಿಕೊಳ್ಳಬೇಕು. 90 ದಶಕದ ಆರಂಭದಲ್ಲಿ ವಲ್ರ್ಡ್ ಫೆಡರೇಶನ್ ಆಫ್ ಮೆಂಟಲ್ ಹೆಲ್ತ್ ಅಧಿಕೃತವಾಗಿ ದಿನವನ್ನು ಸ್ಥಾಪಿಸಿದಾಗಿನಿಂದ ಮಾನಸಿಕ ಆರೋಗ್ಯವು ಬಹಳ ದೂರ ಸಾಗಿದೆ. ಮತ್ತು ಅಂದಿನಿಂದ ಇದನ್ನು ಪ್ರತಿ ವರ್ಷ ಅಕ್ಟೋಬರ್ 10 ರಂದು ಆಚರಿಸಲಾಗುತ್ತದೆ. ಈ ದಿನ ಎಲ್ಲರೂ ತಪ್ಪದೇ ಆಭಾ ಕಾರ್ಡ್ ಮಾಡಿಸಿ ಇದಕ್ಕಾಗಿ ಇಲಾಖೆಯಿಂದ ನಿಮ್ಮ ಸ್ಥಳದಲ್ಲಿಯೇ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಜಿಲ್ಲಾ ಮಾನಸಿಕ ರೋಗಗಳ ಕಾರ್ಯಕ್ರಮ ಅನುμÁ್ಠನಾಧಿಕಾರಿ ಡಾ.ಆರ್.ರೂಪಾ ಮಾತನಾಡಿ, ನೀವು ಒಬ್ಬಂಟಿಯಾಗಿಲ್ಲ. ನಾವು ಮಾತ್ರ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ ಎಂದು ಆಗಾಗ ನಾವು ಭಾವಿಸುತ್ತೇವೆ. ಬಹಳಷ್ಟು ಮಂದಿ ಇಂತಹ ಕಷ್ಟಗಳನ್ನು ದಾಟಿಯೇ ಮುಂದೆ ಸಾಗಿದ್ದಾರೆ. ನೀವು ಯಾವುದಕ್ಕೂ ಅಂಜಬೇಡಿ, ಹಾಗಿದ್ದಾಗ ಮಾತ್ರ ನೀವು ನಿಮ್ಮ ನೋವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಉದ್ದೇಶವು ಪ್ರಪಂಚದಾದ್ಯಂತ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಪ್ರಯತ್ನಗಳನ್ನು ಸಜ್ಜುಗೊಳಿಸಬೇಕು ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, 2022ರ ವಿಶ್ವ ಮಾನಸಿಕ ಆರೋಗ್ಯ ದಿನದ ಧ್ಯೇಯವಾಕ್ಯ ಮೆಂಟಲ್ ಹೆಲ್ತ್ ಇನ್ ಆನ್ ಆನ್‍ಇಕ್ವೆಲ್ ವಲ್ಡ್ (Mental Health in an Unequal World) ಮತ್ತು ಇದನ್ನು ಅಧಿಕೃತವಾಗಿ ದಿ ವಲ್ರ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ ಘೋಷಿಸಿದೆ. ಒಂಟಿಯಾಗಿರುವುದಕ್ಕಿಂತ ಎಲ್ಲರೊಂದಿಗೆ ಇರುವುದು ಉತ್ತಮ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಒಂಟಿಯಾಗಿದ್ದಾಗ ಅನೇಕ ಒಳ್ಳೆಯ ವಿಚಾರಗಳು ಬರುತ್ತವೆ ನಿಜ. ಮನಸ್ಸಿಗೆ ಶಾಂತಿ, ವಿಶ್ರಾಂತಿ ಎರಡೂ ಇರಬೇಕು. ಆಗ ನೀವು ಅಂದುಕೊಂಡಿರುವುದನ್ನು ಸಾಧಿಸಲು ಸಾಧ್ಯ. ಮನಸ್ಸು ಗಟ್ಟಿಯಾಗಲು ಕುಟುಂಬ ಮತ್ತು ಸಮಾಜದ ಬೆಂಬಲ ಪಡೆಯುವುದು ಅಗತ್ಯ. ಭಾರತದಲ್ಲಿ ಕುಟುಂಬ ಮತ್ತು ಸಮಾಜ ಒಟ್ಟಿಗೆ ಸೇರಿದಾಗ ಮನಸ್ಸು ನಕಾರಾತ್ಮಕ ಭಾವನೆಗಳಿಂದ ದೂರವಿರುತ್ತದೆ ಎಂದು ಬಹಳ ಹಿಂದಿನಿಂದಲೂ ನಂಬಲಾಗಿದೆ ಎಂದು ತಿಳಿಸಿದರು.
ಒಂಟಿತನವು ನಿಮ್ಮನ್ನು ಮಾನಸಿಕ ಅಸ್ವಸ್ಥರನ್ನಾಗಿ ಮಾಡಬಹುದು. ಮನಸ್ಸಿನಿಂದ ನಕಾರಾತ್ಮಕ ಆಲೋಚನೆಗಳನ್ನು ತೆಗೆದುಹಾಕಲು ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಜಾಗೃತಿ ಮೂಡಿಸಲು ಅಕ್ಟೋಬರ್ 10 ರಂದು ಪ್ರಪಂಚದಾದ್ಯಂತ ವಿಶೇಷ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 150 ಆಭಾ ಕಾರ್ಡ್, 250 ಜನರ ಮಧುಮೇಹ ರಕ್ತದೊತ್ತಡ ಪರೀಕ್ಷೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಸುರೇಂದ್ರ ಕುಮಾರ್, ಡಾ.ಮಹೇಂದ್ರ ಕುಮಾರ್, ಡಾ.ಸುಪ್ರಿತಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಂಜುನಾಥ್, ಶ್ರೀಧರ್, ಕಿರಣ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ರಜಿನಿ, ಪೂಜಾ, ಅರ್ಪಿತಾ, ಹಸಿರುದಳ ಸಂಸ್ಥೆಯ ಗುರುರಾಜ್, ಮುಭಾರಕ್ ಉಪಸ್ಥಿತರಿದ್ದರು.