ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,ಸುದ್ದಿಒನ್, (ಸೆ.15): ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಪ್ರಧಾನಿ ಮೋದಿರವರ ಹುಟ್ಟುಹಬ್ಬದ ಅಂಗವಾಗಿ ಸೆ.17 ರಂದು ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮೆಗಾ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ರೆಡ್‍ಕ್ರಾಸ್ ರಾಜ್ಯ ಸಮಿತಿ ಸದಸ್ಯ ಕೆ.ಮಧುಪ್ರಸಾದ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಗರದ ದಾವಣಗೆರೆ ರಸ್ತೆಯಲ್ಲಿರುವ ಥೇರಾಪಂಥ್ ಭವನ, ರೋಟರಿ ಬಾಲಭವನ ಹಾಗೂ ವಾಸವಿ ಮಹಲ್‍ನಲ್ಲಿ ರಕ್ತದಾನ ಶಿಬಿರ ನಡೆಯಲಿದ್ದು, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರುವಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. 2014 ರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಿ ಗಿನ್ನಿಸ್ ವಲ್ರ್ಡ್ ಬುಕ್‍ನಲ್ಲಿ ರೆಕಾರ್ಡ್ ಆಗಿತ್ತು. ಈ ಸಾರಿ ಮೂರು ಲಕ್ಷಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಿ ಮತ್ತು ಗಿನ್ನಿಸ್ ವಲ್ಡ್ಸ್ ಬುಕ್ ರೆಕಾರ್ಡ್ಸ್ ಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ರೋಟರಿ ಕ್ಲಬ್, ವಾಸವಿ ಯುವಜನ ಸಂಘ, ಆರ್ಯವೈಶ್ಯ ಮಹಾಸಭಾ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶಿಬಿರ ಹಮ್ಮಿಕೊಂಡಿದ್ದು, ಪ್ರತಿ ವರ್ಷವೂ ಎರಡು ಲಕ್ಷ ಯೂನಿಟ್ ರಕ್ತದ ಕೊರತೆಯನ್ನು ನೀಗಿಸಬೇಕಾಗಿರುವುದರಿಂದ ಮೆಗಾ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ನೀಡುವಂತೆ ಕೆ.ಮಧುಪ್ರಸಾದ್ ಮನವಿ ಮಾಡಿದರು.
ವಾಸವಿ ಬ್ಲಡ್ ಬ್ಯಾಂಕ್, ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ, ಬಸವೇಶ್ವರ ಮೆಡಿಕಲ್ ಕಾಲೇಜು ಬ್ಲಡ್‍ಬ್ಯಾಂಕ್ ರಕ್ತದಾನ ಶಿಬಿರದಲ್ಲಿ ಸಹಕರಿಸಲಿದೆ ಎಂದರು.
ಅಖಿಲ ಭಾರತೀಯ ಥೇರಾ ಪಂಥ್ ಯುವಕ ಪರಿಷತ್ ಅಧ್ಯಕ್ಷ ನೀಲೇಶ್ ಚೋರಾಡಿಯಾ, ಸಂಚಾಲಕ ಹಿತೇಶ್ ಬಾಫ್ನ, ರೋಟರಿ ಕ್ಲಬ್ ಅಧ್ಯಕ್ಷೆ ಮಾಧುರಿ ಮಧುಪ್ರಸಾದ್, ಕಾರ್ಯದರ್ಶಿ ಜಯಶ್ರೀಷಾ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಮಜಹರ್‍ವುಲ್ಲಾ, ವಾಸವಿ ಯುವಜನ ಸಂಘದ ಅವಿನಾಶ್, ವೆಂಕಟೇಶ್‍ಕುಮಾರ್, ಕಾರ್ತಿಕ್ ಇನ್ನು ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.