ನವದೆಹಲಿ: ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಪ್ರತಿ ದಿನ ಕಾವೇರಿ ನೀರು ತಮಿಳುನಾಡಿಗೆ ಹರಿಯುತ್ತಲೆ ಇದೆ. ಇದನ್ನು ಖಂಡಿಸಿ ಇಂದಿ ಬೆಂಗಳೂರು ಬಂದ್ ಮಾಡಲಾಗಿದೆ. ಅಷ್ಟೇ ಅಲ್ಲ ಮಂಡ್ಯ, ಮದ್ದೂರು ಭಾಗದಲ್ಲಿ ಪ್ರತಿಭಟನೆ ಮುಂದುವರೆದಿದೆ.
ಇಂದು ಕಾವೇರಿ ವಿಚಾರವಾಗಿ ದೆಹಲಿಯಲ್ಲಿ ಸಭೆ ನಿಗಧಿಯಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯಿಂದ ಈ ಸಭೆ ನಡೆಯಲಾಗುತ್ತದೆ. ಈ ಸಭೆಯಲ್ಲಿ ನಾಲ್ಕು ರಾಜ್ಯಗಳ ಅಧಿಕಾರಿಗಳು ಹಾಗೂ ಸದಸ್ಯರು ಭಾಗಿಯಾಗುತ್ತಾರೆ. ಸುಪ್ರೀಂ ಕೋರ್ಟ್ ಸೂಚನೆ ಮಾಡಿದಂತೆ ನಾಳೆಗೆ ಐದು ಸಾವಿರ ಕ್ಯೂಸೆಕ್ ನೀರು ಬಿಡುವ ಸಮಯ ಅಂತ್ಯವಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾವೇರಿ ನೀರು ಬಿಡುವ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನ ಮಾಡಬಹುದು.
ಕಾವೇರಿ ನೀರಿನ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್ ಹದಿನೈದು ದಿನಗಳಿಗೊಮ್ಮೆ ಸಭೆ ನಡೆಸಲು ಸೂಚನೆ ನೀಡಿದೆ. ಈ ಸೂಚನೆ ಮೇರೆಗೆ ಇಂದು ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಕರ್ನಾಟಕದ ನೀರಾವರಿ ಇಲಾಖೆಯ ಕಾರ್ಯದರ್ಶಿ ಭಾಗಿಯಾಗುತ್ತಿದ್ದು, ನೀರಾವಾರಿ, ಬೆಳೆ ತಜ್ಞರು, ಹವಮಾನ ಇಲಾಖೆಯ ತಜ್ಞರು, ನೀರು ನಿಯಂತ್ರಣ ಸಮಿತಿಯ ಸದಸ್ಯರು ಭಾಗಿಯಾಗಲಿದ್ದಾರೆ.