ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.13 : ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿರುವ ಕೃಷಿಕರ ಸಮಸ್ಯೆಗಳನ್ನು ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಮನವರಿಕೆ ಮಾಡುವ ಸಲುವಾಗಿ
ತರಳಬಾಳು ಬೃಹನ್ಮಠದ ಸದ್ಧರ್ಮ ನ್ಯಾಯಪೀಠದ ಸಭಾಂಗಣದಲ್ಲಿ ತರಳಬಾಳು ಶ್ರೀಗಳು ಬೆಸ್ಕಾಂ ಅಧಿಕಾರಿಗಳು ಮತ್ತು ರೈತರೊಂದಿಗೆ ಶನಿವಾರ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಸಲಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೃಷಿಕರು ತೀವ್ರ ವಿದ್ಯುತ್ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಒಂದು ತಿಂಗಳ ಅವಧಿಯಲ್ಲಿಯೇ ಎರಡು ಬಾರಿ ಸಿರಿಗೆರೆಯ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ರೈತರು ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದರು. ಬುಧವಾರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 7 ರ ವರೆಗೆ ತೀವ್ರ ಪ್ರತಿಭಟನೆ ನಡೆಸಿದ ರೈತರು ಸಮೀಪದ ಮೈನಿಂಗ್ ಕಂಪನಿಗಳಿಗೆ ವಿದ್ಯುತ್ ನೀಡದೆ ಅದನ್ನು ರೈತರಿಗೆ ಬಳಕೆ ಮಾಡಬೇಕೆಂದು ಆಗ್ರಹಿಸಿದ್ದರು.
ಈ ವೇಳೆ ಕೆಲವು ರೈತ ಮುಖಂಡರು ತರಳಬಾಳು ಶ್ರೀಗಳ ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಮನವಿ ಸಲ್ಲಿಸಿದ್ದರು. ಅದಕ್ಕೆ ಸ್ಪಂದಿಸಿದ್ದ ಶನಿವಾರ ಸಭೆ ಕರೆದಿದ್ದಾರೆ.
ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಈ ಸಭೆ ನಡೆಯಲಿದೆ ಎಂದು ಬೃಹನ್ಮಠದ ಪ್ರಕಟಣೆ ತಿಳಿಸಿದೆ.