ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಸೋತಿದ್ದೇ ತಡ, ಬಿಎಸ್ವೈ ಹಾಗೂ ಯತ್ನಾಳ್ ನಡುವೆ ಯುದ್ಧವೇ ಶುರುವಾಗಿದೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನ ಇಳಿಸುವುದಕ್ಕೆ ಯತ್ನಾಳ್ ಬಣ ಪ್ರಯತ್ನಿಸುತ್ತಿದ್ದರೆ, ಯತ್ನಾಳ್ ಅವರನ್ನ ಬಿಜೆಪಿಯಿಂದ ಉಚ್ಛಾಟನೆ ಮಾಡುವುದಕ್ಕೆ ಪ್ಲ್ಯಾನ್ ನಡೆಯುತ್ತಿದೆ ಎನ್ನಲಾಗಿದೆ. ಇದರ ನಡುವೆ ಇಂದು ಎರಡು ಕಡೆ ರಹಸ್ಯ ಮೀಟಿಂಗ್ ನಡೆಯುತ್ತಿದೆ.

ಇಂದು ಬೆಳ್ಳಂ ಬೆಳಗ್ಗೆಯೇ ರೇಣುಕಾಚಾರ್ಯ ಸೇರಿದಂತೆ ಮಾಜಿ ಶಾಸಕರ ದಂಡು ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ಮನೆಗೆ ಬಂದಿದೆ. ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಸಭೆ ಬಳಿಕ ಮಾತನಾಡಿದ ರೇಣುಕಾಚಾರ್ಯ ಅವರು, ಶಾಸಕ ಯತ್ನಾಳ್ ಗೆ ಎಲ್ಲಿದೆ ಶಕ್ತಿ..? ಅವರು ಇರೋದು ನಾಲ್ಕೇ ಜನ. ಡಿಸೆಂಬರ್ 11 ರಂದು ದಾವಣಗೆರೆಯಲ್ಲಿ ಸಭೆ ಸೇರುತ್ತೇವೆ. ಯತ್ನಾಳ್ ರನ್ನು ಉಚ್ಛಾಟನೆ ಮಾಡಬೇಕಾ..? ಬೇಡ್ವಾ ಎಂಬುದನ್ನು ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.

ಯತ್ನಾಳ್ ಅವರ ನಡೆಗೆ ಬ್ರೇಕ್ ಹಾಕಬೇಕು ಅಂತಾನೇ ವಿಜಯೇಂದ್ರ ಬಣ ಸಾಕಷ್ಟು ಶ್ರಮ ಹಾಕುತ್ತಿದೆ. ಆದರೂ ಯತ್ನಾಳ್ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಇದರ ನಡುವೆ ಯತ್ನಾಳ್ ಬಣ ಕೂಡ ರಹಸ್ಯ ಸಭೆ ನಡೆಸುತ್ತಿದೆ. ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ರಹಸ್ಯ ಸಭೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾದರೆ ಯಾವ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕೆಂದು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ವಕ್ಫ್ ಸೇರಿ ರಾಜಕೀಯ ಬೆಳವಣಿಗೆ ಕುರಿತು ಗಮನ ಸೆಳೆಯುವುದು, ವಕ್ಫ್ ವಿರುದ್ಧದ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಹಲವರು ವಿರೋಧಿಸುತ್ತಿರುವ ಬಗ್ಗೆ ಗಮನಕ್ಕೆ ತರುವ ಬಗ್ಗೆ ಚರ್ಚೆಯಾಗಿದ್ದು, ಈ ಎಲ್ಲಾ ಅಂಶಗಳನ್ನು ಹೈಕಮಾಂಡ್ ನಾಯಕರ ಗಮನಕ್ಕೆ ತರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎನ್ನಲಾಗಿದೆ.

