ಚಿತ್ರದುರ್ಗ, (ಫೆ.09) : ಹಿಜಾಬ್, ಕೇಸರಿ ಮತ್ತು ನೀಲಿ ಶಾಲುಗಳ ಮಧ್ಯೆಯ ಸಂಘರ್ಷದ ಸಂದರ್ಭದಲ್ಲಿ ಮಾಧ್ಯಮಗಳು ಪ್ರಬುದ್ಧತೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಅನಂತ್ ಚಿನಿವಾರ ಅಭಿಪ್ರಾಯ ಪಟ್ಟರು.
ನಗರದ ಕ್ರೀಡಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಲೇಖಕ ತುರುವನೂರು ಮಂಜುನಾಥ್ ರವರ ಮನಮಿಡಿತ ಕೃತಿ ಲೋಕಾರ್ಪಣೆ ಹಾಗೂ ಕೆಂಧೂಳಿ ವಾರಪತ್ರಿಕೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಬೇಕಾದರೆ ರಾಜಕೀಯ, ಅಧಿಕಾರಿ, ವ್ಯವಸ್ಥೆಯ ನಾಯಕತ್ವ ಬಲಿಷ್ಠವಾಗಿರಬೇಕು. ಇಲ್ಲವಾದರೆ ಎಲ್ಲವೂ ಕೂಡ ಜಾಳು ಜಾಳಾಗಿ ಕಂಡುಬರುತ್ತದೆ.
ಸಂಘರ್ಷದ ಸಂದರ್ಭವಾಗಿರುವ ಹಿಜಾಬ್, ಕೇಸರಿ, ನೀಲಿಶಾಲುಗಳ ಹೋರಾಟವನ್ನು ನಿಯಂತ್ರಿಸುವಂತಹ ಶಕ್ತಿ ನಾಡಿನ ಧಾರ್ಮಿಕ ಕೇಂದ್ರಗಳ ಧರ್ಮಗುರುಗಳಿಗೆ ಇದೆ. ಆದರೆ ಇಂತಹ ಪರಿಸ್ಥಿತಿಯನ್ನು ಕಂಡು ಯಾರೊಬ್ಬ ಧಾರ್ಮಿಕ ಗುರುಗಳು ಕೂಡ ಮಾತನಾಡದೆ ಇರುವುದು ಮತ್ತು ಸಾಮಾಜಿಕ ಸಂಘರ್ಷವನ್ನು ತಪ್ಪಿಸಲು ಪ್ರಯತ್ನಿಸದೇ ಇರುವುದು ಶೋಚನೀಯ ಎಂದರು.
ಸಂಘರ್ಷಗಳನ್ನು ಏರ್ಪಾಟು ಮಾಡಿ ತಮ್ಮ ನಾಯಕತ್ವವನ್ನು ಗಟ್ಟಿಗೊಳಿಸಿಕೊಳ್ಳುವ ಮೂಲಕ ಸಮಾಜದ ಧಿಕ್ಕು ತಪ್ಪಿಸುವ ರಾಜಕಾರಣಗಳಿಗೆ ಮಠ ಮತ್ತು ಧಾರ್ಮಿಕ ಪೀಠಗಳು ಬಹಿಷ್ಕಾರ ಹಾಕಿ ನಿಯಂತ್ರಣಕ್ಕೆ ತರಬೇಕಾದ ಜವಾಬ್ದಾರಿ ಮಠಾಧೀüಪತಿಗಳ ಮೇಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಸಂಘರ್ಷವನ್ನು ನಿಯಂತ್ರಿಸಿ ಶಿಕ್ಷಣ ಆದ್ಯತೆ ನೀಡುವಂತೆ ಮಾಡುವ ಉಸಾಬರಿ ರಾಜ್ಯದ ಆಡಳಿತರೂಡ ನಾಯಕರುಗಳ ಮೇಲಿದ್ದು, ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕೆಂದು ಅನಂತ್ ಚಿನಿವಾರ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುರುಘಾಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾಶರಣರು ವ್ಯಕ್ತಿ, ಅಭಿವ್ಯಕ್ತಿ, ಸ್ವಾತಂತ್ರö್ಯವನ್ನು ಪ್ರತಿಯೊಬ್ಬರು ರೂಢಿಸಿಕೊಂಡಾಗ ಅತ್ಯುತ್ತಮವಾದ ಸಾಹಿತ್ಯ ಮತ್ತು ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಸಾಮಾಜಿಕವಾಗಿ ನಿಯಮಾವಳಿಗಳನ್ನು ರೂಪಿಸಿ ಸಮಾಜದ ಸ್ವಾಸ್ತö್ಯಕ್ಕಾಗಿ ನಿರಂತರವಾಗಿ ಕಾರ್ಯಸೂಚಿಯನ್ನು ರೂಪಿಸಲಾಗಿದ್ದು ಆ ನಿಟ್ಟಿನಲ್ಲಿ ಸಮಾಜದ ಬೆಳವಣಿಗೆಗೆ ಕಾರ್ಯ ಪ್ರವೃತ್ತರಾಗಿದ್ದೇವೆಂದು ಹೇಳಿದ ಮುರುಘಾ ಶ್ರೀಗಳು ಸ್ವಾತಂತ್ರö್ಯವನ್ನು ಸೂಕ್ಷ್ಮವಾಗಿ ಬಳಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಾದ ಜಾವಾಬ್ದಾರಿ ಮಾಧ್ಯಮ ಕ್ಷೇತ್ರದವರ ಮೇಲಿದೆ ಎಂದು ಹೇಳಿದರು.
ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೈ.ಎಸ್. ಸೋಮಶೇಖರ್ ಮಾತನಾಡಿ ಕಾನೂನಿನ ಚೌಕಟ್ಟಿನಲ್ಲಿ ಸರ್ಕಾರ ನೀತಿ, ನಿಯಮಗಳನ್ನು ರೂಪಿಸುತ್ತದೆ. ಅವುಗಳನ್ನು ಪಾಲಿಸುವ ಮೂಲಕ ಸಮಾಜದ ನೆಮ್ಮದಿಗಾಗಿ ಪ್ರತಿಯೊಬ್ಬರು ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
‘ಮನಮಿಡಿತ’ ಕೃತಿಯ ಲೇಖಕ ತುರುವನೂರು ಮಂಜುನಾಥ್ ಮಾತನಾಡಿ ಮಾಧ್ಯಮ ಕ್ಷೇತ್ರ ಸದಾ ಸಂಕಷ್ಟಗಳು ಮತ್ತು ಸವಾಲುಗಳನ್ನು ಎದುರಿಸುತ್ತಾ ಬೆಳೆಯಬೇಕಾಗುತ್ತದೆ. ಯಾರದೇ ಮರ್ಜಿ ಮತ್ತು ಮುಲಾಜಿಗೆ ಒಳಗಾಗದೆ ಪತ್ರಿಕೆಯನ್ನು ನಿರಂತರವಾಗಿ ಹೊರತರಲಾಗುತ್ತಿದೆ ಎಂದು ಮಂಜುನಾಥ್ ಹೇಳಿದರು.
ಇದೇ ಸಂದರ್ಭದಲ್ಲಿ ‘ನೂತನ’ ಎನ್.ಜಿ.ಒ. ಅಧ್ಯಕ್ಷರಾದ ರಾಘವೇಂದ್ರ (ರಘು) ರವರು, ಪ್ರಾಧೇಶಿಕ ಸಾರಿಗೆ ಅಧಿಕಾರಿಗಳು ಎಸ್.ಬಾಲಕೃಷ್ಣ ಮುಂತಾದವರು ಮಾತನಾಡಿದರು.
ವಿವಿಧ ಕ್ಷೇತ್ರ ಗಣ್ಯರಾದ ಟಿ.ಕೆ. ಬಸವರಾಜ್, ಕ.ಮ.ರವಿಶಂಕರ್, ಚಳ್ಳಕೆರೆ ರ‍್ರಿಸ್ವಾಮಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಓ. ಪರಮೇಶ್ವರಪ್ಪ, ಹಂಪಿ ವಿ.ವಿ. ಪ್ರಾಧ್ಯಾಪಕ ಸೋಮಶೇಖರ್, ಡಾ. ಅಲೆಕ್ಸಾಂಡರ್, ಹೆಚ್. ಲಕ್ಷ್ಮಣ್ ಮುಂತಾದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನು ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿದರು. ಕಾರ್ಯಕ್ರಮ ನಿರೂಪಿಸಿ ಹನೀಫ್ ಎಮ್. ಕೋಟೆ ವಂದಿಸಿದರು.