ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್.03 : ಮೂಲಭೂತ ಸಂಗತಿಗಳು ಬದಲಾಗಿರುವುದನ್ನು ಮಾಧ್ಯಮಗಳು ಗುರುತಿಸುವ ಬದಲು ಉದ್ಯಮಗಳಾಗಿವೆ ಎಂದು ಜಾಗೃತ ಕರ್ನಾಟಕ ವೇದಿಕೆಯ ಡಾ.ವಾಸು ವಿಷಾಧಿಸಿದರು.
ಈ ದಿನ ಡಿಜಿಟಲ್ ಮಾಧ್ಯಮ ಬೆಂಗಳೂರು, ಧಮ್ಮ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಸಹಯೋಗದೊಂದಿಗೆ ಸೀಬಾರ ಸಮೀಪವಿರುವ ಧಮ್ಮ ಕೇಂದ್ರದಲ್ಲಿ ಶುಕ್ರವಾರ ನಡೆದ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಸಂವಾದ ಉದ್ಘಾಟಿಸಿ ಮಾತನಾಡಿದರು.
ಶ್ರೀಮತಿ ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ಕರಾಳ ದಿನವಾಗಿತ್ತು. ಪ್ರತಿಭಟನಾಕಾರರು, ಹೋರಾಟಗಾರರು, ಚಳುವಳಿಗಾರರನ್ನು ಜೈಲಿಗೆ ಹಾಕಲಾಯಿತು. ಮಾಧ್ಯಮದ ಸ್ವಾತಂತ್ರವನ್ನು ಹರಣಗೊಳಿಸಲಾಗಿತ್ತು. ಈಗ ಚಳುವಳಿಯ ಸ್ವರೂಪ ಅಪ್ರಸ್ತುತವಾಗಿದೆ. ಸಮಾಜದ ಬದಲಾವಣೆಗೆ ಮಾದ್ಯಮಗಳ ಕೊಡುಗೆ ಏನು ಎನ್ನುವಂತ ಪ್ರಶ್ನೆ ಸಾಮಾನ್ಯ ಜನರಲ್ಲಿಯೂ ಕಾಡತೊಡಗಿದೆ. ವಿನೂತನ ಬದಲಾವಣೆ ಕಂಡುಕೊಳ್ಳದಿದ್ದರೆ ಹೋರಾಟ, ಚಳುವಳಿಗಳು ಅಪ್ರಸ್ತುತವಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಕೃಷಿ ಕಾಯಿದೆ ನೀತಿ ವಿರೋಧಿಸಿ ದೆಹಲಿಯಲ್ಲಿ ತಿಂಗಳಾನುಗಟ್ಟಲೆ ರೈತರು ಗಾಳಿ ಮಳೆಯನ್ನು ಲೆಕ್ಕಿಸದೆ ಹಗಲು-ರಾತ್ರಿ ಹೋರಾಟ ನಡೆಸುತ್ತಿದ್ದಾಗ ಮಾಧ್ಯಮಗಳ ಪ್ರಭಾವ ಅಷ್ಟಾಗಿ ಬೀರಿದ್ದು ಕಂಡು ಬರಲಿಲ್ಲ. ಬದಲಾಗಿ ಹೋರಾಟಗಾರರನ್ನು ಕೆಲವರು ಗೇಲಿ ಮಾಡಿದ್ದು, ಎಷ್ಟು ಸರಿ ಎಂದು ಪ್ರಶ್ನಿಸಿದರು.
ಡಿಜಿಟಲ್ ಮೀಡಿಯ ಪ್ರಭಾವ ಜಾಸ್ತಿಯಾಗಿದೆ. ಹೊಸ ರೀತಿಯ ಮಾಧ್ಯಮ ಆಂದೋಲನಗಳು ಹೊಸ ಬೆಳವಣಿಗೆಯಾಗುವ ಕಾಲಘಟ್ಟದಲ್ಲಿದೆ. ಮಾಧ್ಯಮ, ಆಂದೋಲನ ಸೇರಿದಾಗ ಸಮಾಜದಲ್ಲಿ ದೊಡ್ಡ ಪರಿವರ್ತನೆ ತರುವ ಸಾಧ್ಯತೆಗಳಿವೆ. ಎಲ್ಲಾ ರಂಗ ಕೆಟ್ಟಿರುವಂತೆ ಮಾಧ್ಯಮ ಕೂಡ ಕೆಟ್ಟಿದೆ ಎನ್ನುವುದು ಕೆಲವರ ವಾದ ಹಾಗಂತ ಇಡಿ ಮಾಧ್ಯಮವನ್ನು ದೂಷಿಸುವುದು ಸರಿಯಲ್ಲ. ಇಂದಿಗೂ ಮಾಧ್ಯಮದಲ್ಲಿ ಅನೇಕ ಪ್ರಾಮಾಣಿಕರಿದ್ದಾರೆ ಎನ್ನುವುದು ಸತ್ಯ ಎಂದರು.
ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ ಕಂಬಾಲಪಲ್ಲಿ ದಲಿತರ ಹತ್ಯಾಕಾಂಡ, ಉಡುಪಿಯ ಮಡೆಸ್ನಾನ, ಹೀಗೆ ಹತ್ತು ಹಲವಾರು ಪ್ರಕರಣಗಳಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಗಂಭೀರವಾಗಿದ್ದುದರಿಂದ ನಿಜ ಸಂಗತಿಗಳು ಹೊರಬರಲು ಸಾಧ್ಯವಾಯಿತು. ಎಷ್ಟೊ ಮುಚ್ಚಿ ಹೋಗಿದ್ದ ಪ್ರಕರಣಗಳನ್ನು ಬೆಳಕಿಗೆ ತಂದು ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಮಾಧ್ಯಮಗಳು ಇಂದಿಗೂ ನಿಷ್ಟುರವಾಗಿ ಕೆಲಸ ಮಾಡುತ್ತಿವೆ. ಕೆಲವರಲ್ಲಿ ಮಾಧ್ಯಗಳ ಮೇಲಿನ ಆಲೋಚನಾ ಕ್ರಮಗಳು ಬದಲಾಗಿದೆ. ಅದಕ್ಕಾಗಿ ಪೂರ್ವಾಗ್ರಹ ಪೀಡಿತ ಕಡಿಮೆಯಾಗಬೇಕಿದೆ.
ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಅಪ್ಪರ್‍ಭದ್ರಾ ಯೋಜನೆ ಜಾರಿಗಾಗಿ ನಡೆದ ಹೋರಾಟ, ಚಳುವಳಿಯಲ್ಲಿ ಮಾಧ್ಯಮದವರ ಪಾತ್ರ ಸಾಕಷ್ಟಿದೆ. ಚಳುವಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾಧ್ಯಮಗಳ ಕಾಳಜಿಯಿದೆ. ಅನೇಕ ಜ್ವಲಂತ ಸಮಸ್ಯೆಗಳು ಇನ್ನು ನೆನೆಗುದಿಗೆ ಬಿದ್ದಿವೆ. ಸಾಮಾನ್ಯ ಜನರೊಂದಿಗೆ ಬೆರೆಯುವ ಆಶಯ ಮಾಧ್ಯಮದವರಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧಮ್ಮ ಕೇಂದ್ರದ ಆರ್.ವಿಶ್ವಸಾಗರ್, ವಿಮುಕ್ತಿ ಧಮ್ಮ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ಆರ್.ವಿಶ್ವಸಾಗರ್, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್, ಮಕ್ಕಳ ತಜ್ಞ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಚಂದ್ರನಾಯ್ಕ ವೇದಿಕೆಯಲ್ಲಿದ್ದರು.
ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎಂ.ಎನ್.ಅಹೋಬಲಪತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪತ್ರಕರ್ತ ಹೆಚ್.ಲಕ್ಷ್ಮಣ್, ಕನ್ನಡಪ್ರಭ ಛಾಯಾಗ್ರಾಹಕ ದ್ವಾರಕನಾಥ್ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.