ವರದಿ : ಚಳ್ಳಕೆರೆ ವೀರೇಶ್, ಮೊ : 99801 73050
ಚಳ್ಳಕೆರೆ, (ಅ.25) : ಓದಿದ್ದು ಎಂ.ಕಾಮ್ ಹಲವಾರು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಕೃಷಿಯೇ ಲೇಸು ಎಂದು ತನ್ನ ಮೂರು ಎಕರೆ ಜಮೀನಿಗೆ ಕಳೆದ ಜೂನ್ ನಲ್ಲಿ ಸುಮಾರು ಒಂದು ಕ್ವಿಂಟಲ್ 30 ಕೆ.ಜಿ ಡಿಎಚ್.256 ಶೇಂಗಾ ಬಿತ್ತನೆ ಮಾಡಿ ಭರ್ಜರಿ ಬೆಳೆ ಬೆಳೆದು ಇತರೆ ರೈತರ ಹುಬ್ಬೇರಿಸುವಂತೆ ಮಾಡಿದ್ದಾನೆ.
ಹೌದು….! ತಾಲ್ಲೂಕಿನ ತಳಕು ಹೋಬಳಿಯ ಘಟಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಲಸೆ ಗ್ರಾಮದ ಯುವ ರೈತ ಚಂದ್ರು ಸುಕೋ ಬ್ಯಾಂಕ್, ಚೋಳಮಂಡಲಂ ವೆಹಿಕಲ್ ಫೈನಾನ್ಸ್ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಮನೆ ಸೇರಿದ್ದ ರೈತ ಚಂದ್ರುರವರು ತಮ್ಮ ತಂದೆಯ ಕೃಷಿ ಚಟುವಟಿಕೆಯಲ್ಲಿ ಆಗಾಗ ಭಾಗಿಯಾಗುತ್ತಿದ್ದರು. ಈ ಬಾರಿಗೆ ತಾನೆ ಕೃಷಿ ಮಾಡುವ ಇಂಗಿತ ವ್ಯಕ್ತಪಡಿಸಿದ ಚಂದ್ರು ತಂದೆಯ ಮಾರ್ಗದರ್ಶನದಂತೆ ಕಳೆದ ಮೇ-ಜೂನ್ ನಲ್ಲಿ ತಮ್ಮ ಜಮೀನಿಗೆ ಶೇಂಗಾ ಬಿತ್ತನೆ ಮಾಡಿದರು. ಕಾಲ ಕಾಲಕ್ಕೆ ಔಷಧಿ, ಗಿಡಗಳ ಪೋಷಣೆ ಮಾಡಿದರು.
ಮಳೆಯಾಶ್ರಿತ ಜತೆಗೆ, ಅಲ್ಪ,ಸ್ವಲ್ಪ ನೀರಾವರಿ ವ್ಯವಸ್ಥೆಯೂ ಇರುವ ಇವರ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿ ಉತ್ತಮ ಫಸಲು ಪಡೆಯುವಲ್ಲಿ ಸಫಲರಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಕಟಾವು ಮಾಡಿದಾಗ ಅವರು ಬೆಳೆದ ಶೇಂಗಾ ಗಿಡದಲ್ಲಿ ಸುಮಾರು 70ರಿಂದ100 ಕಾಯಿ ಒಂದು ಗಿಡದಲ್ಲಿ ಇರುವುದು ಕಂಡ ರೈತ ಪುಳಕಿತರಾದರು. ತಮ್ಮ ಶ್ರಮಕ್ಕೆ ಫಲ ಸಿಕ್ಕಿದೆ ಎಂದು ಸಂತಸಪಟ್ಟಿದ್ದಾರೆ.
ಅತಿವೃಷ್ಠಿ, ಅನಾವೃಷ್ಠಿಯಿಂದ ನೂರಾರು ಹೆಕ್ಟೇರ್ ಪ್ರದೇಶದ ಶೆಂಗಾ, ಈರುಳ್ಳಿ ಬೆಳೆ ರೈತರ ಕೈ ಸೇರದ ದಿನಗಳಲ್ಲಿ ವಲಸೆ ಗ್ರಾಮದ ರೈತನ ಸಾಧನೆ ಎಲ್ಲರಿಗೂ ಆಚ್ಚರಿ ಉಂಟು ಮಾಡಿದೆ. ಕಡಿಮೆ ಮಳೆಯಿಂದ ಶೇಂಗಾವೇ ಕಟ್ಟದ ಗಿಡ, ಅತಿ ಮಳೆಯಿಂದ ಕೊಳೆತು ಹೋಗುತ್ತಿರುವ ಪ್ರಸ್ತುತ ದಿನದಲ್ಲಿ ರೈತನ ಸಾಧನೆ ಪವಾಡವೇ ಸರಿ.
ನಾನು ಹಾಕಿದ ಮೂರು ಎಕರೆಯ ಪ್ರತಿ ಗಿಡದಲ್ಲೂ ಉತ್ತಮ ಶೇಂಗಾ ಕಟ್ಟಿದೆ. ಹಿರಿಯೂರಿನ ಬಬ್ಬೂರು ಕೃಷಿ ವಿಜ್ಞಾನಿ ಹರೀಶ್ ಮಾರ್ಗದರ್ಶನದಂತೆ ಡಿಎಚ್ 256 ಶೇಂಗಾ ಬೀಜ ಬಿತ್ತನೆ ಮಾಡಿ, ಕಾಲಕಾಲಕ್ಕೆ ಅವರ ಮಾರ್ಗದರ್ಶನದಂತೆ ಗಿಡಗಳ ಪೋಷಣೆ ಮಾಡಿದ್ದಕ್ಕೆ ಉತ್ಕೃಷ್ಟ ಫಸಲು ನಮ್ಮ ಕೈಸೇರಿದೆ ಎನ್ನುತ್ತಾರೆ ರೈತ ಚಂದ್ರುರವರ ತಂದೆ ತಿಪ್ಪೇಸ್ವಾಮಿ. ಪ್ರತಿ ಬೆಳೆಯ ನಂತರ ಭೂಮಿಗೆ ಬೇಕಾಗುವ ಪೋಷ್ಟೀಕಾಂಶದ ಕೊಟ್ಟಿಗೆ ಗೊಬ್ಬರ, ಜೀವಾಮೃತ ಸೇರಿದಂತೆ ಪರಿಸರ ಸ್ನೇಹಿಗೊಬ್ಬರಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಚಂದ್ರು : 8105053955