ನವದೆಹಲಿ: ಪಾಲಿಕೆ ಚುನಾವಣೆ ನಡೆದು ಎರಡು ತಿಂಗಳ ಬಳಿಕ ಇದೀಗ ದೆಹಲಿ ಪಾಲಿಕೆಗೆ ಮೇಯರ್ ಆಯ್ಕೆ ಮಾಡಲಾಗಿದೆ. ಕಳೆದ ಹದಿನೈದು ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಮೇಯರ್ ಸ್ಥಾನ ಇದೀಗ ಎಎಪಿ ಪಾಲಾಗಿದೆ. ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 150 ಮತಗಳನ್ನು ಪಡೆಯುವಲ್ಲಿ ಶೆಲ್ಲಿ ಭರ್ಜರಿ ಜಯಬೇರಿ ಬಾರಿಸಿದ್ದಾರೆ.
ದೆಹಲಿಯ 250 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ ಬಿಜೆಪಿ 104, ಕಾಂಗ್ರೆಸ್ 9, ಎಎಪಿ 134 ಸ್ಥಾನ ಗಳಿಸುವ ಮೂಲಕ ಬಿಜೆಪಿ ತೆಕ್ಕೆಯಿಂದ ಮೇಯರ್ ಸ್ಥಾನ ಕಸಿದುಕೊಂಡಿದೆ. ದೆಹಲಿ ಮೇಯರ್, ಉಪಮೇಯರ್ ಚುನಾವಣೆಗೆ ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶಿತ ಸದಸ್ಯರಿಗೂ ಅವಕಾಶ ನೀಡಲಾಗಿತ್ತು. ಇದನ್ನು ವಿರೋಧಿಸಲಾಗಿತ್ತು. ಪಾಲಿಕೆ ಆವರಣದಲ್ಲಿ ಗಲಭೆ, ಗದ್ದಲ ಎದ್ದಿತ್ತು. ಹೀಗಾಗಿ ಪಾಲಿಕೆ ಚುನಾವಣೆಯನ್ನು ನಾಲ್ಕು ಬಾರಿ ಮುಂದೂಡಲಾಗಿತ್ತು.
ಈ ವಿಚಾರ ಸಂಬಂಧ ಆಪ್ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಆದೇಶದಂತೆ ಇಂದು ಚುನಾವಣೆ ನಡೆದಿದ್ದು, ಎಎಪಿ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ರೇಖಾ ಗುಪ್ತಾ ಸೋಲು ಅನುಭವಿಸಿದ್ದಾರೆ.