ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಆಗಾಗ ಸಿಎಂ ಬದಲಾವಣೆಯ ವಿಚಾರ ಚರ್ಚೆಗೆ ಬರ್ತಾನೆ ಇರುತ್ತದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯುತ್ತಾರೆ ಎಂಬ ಚರ್ಚೆಯ ಜೊತೆಗೆ ನಾನು ಕೂಡ ಸಿಎಂ ಆಗಬಹುದು ಎಂಬ ಆಸೆ ಅನೇಕರಲ್ಲಿ ಹುಟ್ಟಿಕೊಳ್ಳುತ್ತಿದೆ. ಹೀಗೆ ಒಬ್ಬೊಬ್ಬರೆ ಸಿಎಂ ಪಟ್ಟದ ಆಕಾಂಕ್ಷಿಗಳಾಗಿದ್ದು, ಹನುಮಂತನ ಬಾಲ ಬೆಳೆದಂತೆ ಬೆಳೆಯುತ್ತಿದೆ. ಇದೀಗ ಸಚಿವ ಎಂ.ಬಿ.ಪಾಟೀಲ್ ಕೂಡ ತಾನೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆಯಂತು ಇಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ. ಸಿಎಂ ಆಗುವುದಕ್ಕೆ ಸೀನಿಯಾರಿಟಿ ಬೇಕಾಗಿಲ್ಲ. ಒಂದು ಮಾತು ಹೇಳುತ್ತೇನೆ, ಕಾಂಗ್ರೆಸ್ ನಲ್ಲಿ ನಾನು ಕೂಡ ಸಿಎಂ ಆಗುತ್ತೇನೆ. ವಿಜಯಪುರದಿಂದ ಸಿಎಂ ಆದರೆ ನಾನೇ ಆಗೋದು. ಶಿವಾನಂದ ಪಾಟೀಲ್ ಅಂತು ಆಗುವುದಕ್ಕೆ ಸಾಧ್ಯವಿಲ್ಲ. ಅವ್ರು ಇವಾಗ ಜನತಾದಳದಿಂದ ಕಾಂಗ್ರೆಸ್ ಗೆ ಬಂದಿರುವುದು ಎಂದಿದ್ದಾರೆ.
ಒಂದಲ್ಲ ಒಂದು ದಿನ ಸಿಎಂ ಆಗ್ತೇನೆ ಎಂದಿರುವ ಎಂಬಿ ಪಾಟೀಲ್ ಮೂಡಾ ಹಗರಣದ ಬಗ್ಗೆಯೂ ಮಾತನಾಡಿದ್ದಾರೆ. ಮುಡಾ ತಪ್ಪೇ, ಸೈಟ್ ಹಂಚಿಕೆ ಆಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ, ಇದರಲ್ಲಿ ಸಿದ್ದರಾಮಯ್ಯನವರ ಪಾಲು ಏನಿದೆ ? ಮುಡಾದಿಂದ ಯಾರೂ ಭಯಗೊಂಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡ್ತಿದ್ದೇವೆ. ಇದರಲ್ಲಿ ನಮಗೆ ಜಯ ಸಿಕ್ಕೆ ಸಿಗುತ್ತದೆ. ಹಗಲು ಕನಸು ಬೇಡ, ಗವರ್ನರ್ ನಡವಳಿಕೆ ಮಾತ್ರ ಕಾನೂನು ಬಾಹಿರ ಎಂದು ಹೇಳಿದರು. ಈ ಮೂಲಕ ಸಿಎಂ ಆಗುವ ರೇಸ್ ನಲ್ಲಿ ಎಂಬಿ ಪಾಟೀಲ್ ಕೂಡ ಇರುವುದು ಸ್ಪಷ್ಟವಾಯಿತು.