ಸರ್ಕಾರಿ ಆಸ್ಪತ್ರೆಗಳಲ್ಲಿಯೇ ತಾಯಿ ಮರಣ, ಸಿಜೇರಿಯನ್ ಹೆರಿಗೆ ಹೆಚ್ಚಳ : ಬಡವರ ಹೆಣ್ಣು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ ? ಕೆಡಿಪಿ ಸಭೆಯಲ್ಲಿ ಭಾರೀ ಚರ್ಚೆ..!

2 Min Read

ಚಿತ್ರದುರ್ಗ. ಮಾರ್ಚ್. 25: ರಾಜ್ಯದ ಸರಾಸರಿಗಿಂತಲೂ, ಜಿಲ್ಲೆಯಲ್ಲಿ ತಾಯಿ ಮರಣ, ಶಿಶು ಮರಣ ಹಾಗೂ ಸಿಜೇರಿಯನ್ ಪ್ರಮಾಣ ಹೆಚ್ಚಳಕ್ಕೆ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಕಳವಳ ವ್ಯಕ್ತಪಡಿಸಿ, ತಾಯಿ ಮರಣ, ಶಿಶು ಮರಣಕ್ಕೆ ಸಂಬಂಧಿಸಿದಂತೆ ಪ್ರತಿ ಕೇಸ್‍ಗೂ ಪ್ರತ್ಯೇಕ ವಿಶ್ಲೇಷಣಾ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದ ಸರಾಸರಿಗಿಂತಲೂ ಜಿಲ್ಲೆಯಲ್ಲಿ ತಾಯಿ ಮರಣ, ಶಿಶು ಮರಣ ಹಾಗೂ ಸಿಜೇರಿಯನ್ ಪ್ರಮಾಣ ಹೆಚ್ಚಳಕ್ಕೆ ಕೆಡಿಪಿ ಸಭೆಯಲ್ಲಿ ಸಚಿವರು ಸೇರಿದಂತೆ ಶಾಸಕರು ತೀವ್ರ ಕಳವಳ ವ್ಯಕ್ತಪಡಿಸಿದರು.

ಹೊಳಲ್ಕೆರೆ ಶಾಸಕ ಡಾ. ಎಂ.ಚಂದ್ರಪ್ಪ ಮಾತನಾಡಿ, ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಇದ್ದಾರೆ. ಜತೆಗೆ ಪೂರಕ ಪೌಷ್ಠಿಕ ಆಹಾರ, ಅಗತ್ಯ ಔಷಧಿಗಳು ಇವೆ.  ಆದಾಗ್ಯೂ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಯಾಕೆ ತಾಯಿ ಮರಣ ಸಂಭವಿಸುತ್ತದೆ. ಬಡವರ ಹೆಣ್ಣು ಮಕ್ಕಳ ಸಾವಿಗೆ ಬೆಲೆ ಇಲ್ಲವೇ? ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಅವರು, ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಸೂಚನೆ ನೀಡಿದರು.

ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಹೊಸದುರ್ಗ ತಾಲ್ಲೂಕಿನಲ್ಲಿಯೂ ಗರ್ಭಿಣಿಯರ ಸಾವು ಹಾಗೂ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗುತ್ತಿದೆ. ತಾಯಿ ಮರಣ, ಶಿಶು ಮರಣ ತಡೆಯುವವರು ಯಾರು ಎಂದು ಪ್ರಶ್ನಿಸಿದ ಅವರು, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಸಹಜ ಹೆರಿಗೆ ಮಾಡಿಸಲು ಶಿಫಾರಸ್ಸು ಮಾಡುವಂತೆ ಮನೆಗೆ ಬಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರಿಗೆ ಸಹಜ ಹೆರಿಗೆಯ ಅರಿವು ಆಗಿದೆ. ಆದರೆ ವೈದ್ಯಾಧಿಕಾರಿಗಳೇ ಸಿಜೇರಿಯನ್‍ಗೆ ಮುಂದಾಗುತ್ತಿದ್ದಾರೆ. ಸಹಜ ಹೆರಿಗೆ ಮಾಡಿಸುವಂತೆ ಶಿಫಾರಸ್ಸು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ತಾಯಿ ಮರಣ, ಶಿಶು ಮರಣ ಹಾಗೂ ಸಿಜೇರಿಯನ್ ಹೆಚ್ಚಳ ಕುರಿತಂತೆ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ವರದಿ ನೀಡುವಂತೆ ನೋಟಿಸ್ ನೀಡುವಂತೆ ತಾಕೀತು ಮಾಡಿದರು. ತಾಯಿ ಮರಣ, ಶಿಶು ಮರಣಕ್ಕೆ ಸಂಬಂಧಿಸಿದಂತೆ ಪ್ರತಿ ಕೇಸ್‍ಗೂ ಪತ್ಯೇಕ ವಿಶ್ಲೇಷಣಾ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ತಾಯಿ ಮರಣ, ಶಿಶು ಮರಣ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರತಿ ತಿಂಗಳು 6ನೇ ತಾರೀಖು ಹಾಗೂ 24 ನೇ ತಾರೀಖು ಗರ್ಭೀಣಿಯರಿಗೆ ವಿವಿಧ ಪರೀಕ್ಷೆಗಳನ್ನು ನಡೆಸಿ, ಅವರಿಗೆ ಕಬ್ಬಿಣಾಂಶದ ಮಾತ್ರೆ ಸೇರಿದಂತೆ ವಿವಿಧ ಅಗತ್ಯ ಚಿಕಿತ್ಸೆ ಔಷಧಗಳನ್ನು ನೀಡಲಾಗುತ್ತಿದೆ ಎಂದು ಡಾ. ರೇಣುಪ್ರಸಾದ್ ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *