ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಮಾ. 07 : ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಮೀಸಲಾತಿಯನ್ನು ನೀಡದೆ ದಿಕ್ಕು ತಪ್ಪಿಸಿ ದಲಿತ ಸಮುದಾಯಗಳಿಗೆ ದ್ರೋಹವೆಸಗುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನದ ರೂಪು ರೇಷೆಗಳನ್ನು ರೂಪಿಸುವ ಸಲುವಾಗಿ ಮಾ. 8ರ ಭಾನುವಾರ ಬೆಳಿಗ್ಗೆ 10ಕ್ಕೆ ಚಿತ್ರದುರ್ಗದ ವಾಲ್ಮೀಕಿ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಎಸ್.ಟಿ.ಮೋರ್ಚಾದ ರಾಜ್ಯದ್ಯಕ್ಷರಾದ ಬಂಗಾರು ಹನುಮಂತ ಹಾಗೂ ಎಸ್.ಸಿ. ಮೋರ್ಚಾದ ರಾಜ್ಯಾಧ್ಯಕ್ಷರಾದ ಸಿಮೆಂಟ್ ಮಂಜು ತಿಳಿಸಿದ್ದಾರೆ.
ಈ ಸಭೆಯಲ್ಲಿ ಮಾಜಿ ಸಚಿವರಾದ ಶ್ರೀರಾಮುಲು, ಮಾಜಿ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿಗಳು ಸಂಸದರಾದ ಗೋವಿಂದ ಕಾರಜೋಳ, ಶಾಸಕರಾದ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ರಾದ ತಿಪ್ಪಾರೆಡ್ಡಿ, ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಸೇರಿದಂತೆ ಎಸ್.ಟಿ., ಎಸ್.ಸಿ.ಸಮುದಾಯದ ಹಾಲಿ ಮಾಜಿ ಸಂಸದರು, ಶಾಸಕರುಗಳು, ಹಿರಿಯ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ.
ಈ ಸಂಬಂಧ ಚಿತ್ರದುರ್ಗ ನಗರದ ಜಗಳೂರು ಮಹಾಲಿಂಗಪ್ಪ ಸಭಾಂಗಣದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿ ಯಾನ-2026″ರ ದಾವಣಗೆರೆ ವಿಭಾಗ ವಿಷಯ ಪ್ರಮುಖರ ಕಾರ್ಯಗಾರದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಭಿತ್ತಿ ಪತ್ರವನ್ನು ಪಕ್ಷದ ಮುಖಂಡರು ಬಿಡುಗಡೆ ಮಾಡಿದರು.




