ಕುರುಗೋಡು. ಡಿ.6
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಡಿ.11 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಎಚ್. ಜಿ. ಯುವರಾಜ್ ತಿಳಿಸಿದರು.
ಬೃಹತ್ ಸಮಾವೇಶದ ಕರಪತ್ರಗಳನ್ನು ಪಟ್ಟಣದ ಬಾದನಹಟ್ಟಿ ರಸ್ತೆಯ ಪ್ರವಾಸಿ ಮಂದಿರದ ಮುಂದುಗಡೆ ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ಹಿಂದಿನ ಯಾವುದೇ ರಾಜ್ಯ ಸರ್ಕಾರಗಳು ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ಹಾಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಈ ಒಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಮಾದಿಗರು ಸೇರಿದಂತೆ ಪರಿಶಿಷ್ಟ ಜಾತಿಯ ಹಲವು ಉಪಪಂಗಡಗಳು ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಇನ್ನೂ ಹಿಂದುಳಿದಿವೆ. ಈ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸಿ ಸಾಮಾಜಿಕ ನ್ಯಾಯ ಕಲ್ಪಿಸಬೇಕಾದರೆ ಸದಾಶಿವ ಆಯೋಗದ ವರದಿ ಅನುಷ್ಠಾನಗೊಳ್ಳಬೇಕು. ಈ ಬಗ್ಗೆ ಸಂಘಟನೆಗಳು ಸುಮಾರು ವರ್ಷ ಗಳಿಂದ ಹೋರಾಟ ನಡೆಸುತ್ತಲೇ ಬಂದಿವೆ ಆದರೂ ಸರಕಾರ ಇದರ ಬಗ್ಗೆ ಗಂಬಿರವಾಗಿ ಪರಿಗಣಿಸಿಲ್ಲ ಎಂದರು.
ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವಂತೆ, ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು. ಪರಿಶಿಷ್ಟ ಜಾತಿಯಲ್ಲಿ ಮೊದಲು ಅಸ್ಪೃಶ್ಯ ಜಾತಿಗಳು ಮಾತ್ರ ಇದ್ದವು. ಬಳಿಕ ಲಂಬಾಣಿ, ಬಂಜಾರ, ಭೋವಿ (ವಡ್ಡರ), ಕೊರಮ, ಕೊರಚ ಜಾತಿಗಳು ಸೇರಿಕೊಂಡು ಅಸ್ಪೃಶ್ಯ ಜಾತಿಗಳ ಮೀಸಲಾತಿ ಸೌಲಭ್ಯವನ್ನು ಕಬಳಿಸುತ್ತಿವೆ. ಇದರಿಂದ ಅಸ್ಪೃಶ್ಯ ಜಾತಿಗಳಿಗೆ ಸೌಲಭ್ಯ ಹಂಚಿಕೆಯಲ್ಲಿ ತಾರತಮ್ಯ ಅನ್ಯಾಯವಾಗುತ್ತಿದೆ. ಸ್ಪರ್ಶ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಬೃಹತ್ ಸಮಾವೇಶಕ್ಕೆ ಬಳ್ಳಾರಿ ಜಿಲ್ಲೆಯಿಂದ ಅತಿ ಹೆಚ್ಚಿನ ಸಂಖ್ಯೆ ಯಲ್ಲಿ ಮಂದಿಯನ್ನು ಸೇರಿಸುವ ಯೋಜನೆ ಹೊಂದಲಾಗಿದೆ. ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಬೃಹತ್ ಸಮಾವೇಶದ ಕರ ಪತ್ರಗಳನ್ನು ಬಿಡುಗಡೆ ಗೊಳಿಸಿ ಪ್ರಗತಿಪರ ಸಂಘಟನೆ ಗಾರರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾದಿಗ ದಂಡೋರ ರಾಜ್ಯ ಖಜಾಂಚಿ ಬೆಳಗಲ್ಲು ಹುಲುಗಪ್ಪ, ಮುಖಂಡರಾದ ಕೆಂಚಪ್ಪ, ಬಾಬು, ಗಾಧಿಲಿಂಗ, ಶಂಕರ, ಮಲ್ಲಪ್ಪ, ಬಸವ, ಈರಣ್ಣ, ಬಸಪ್ಪ, ಗ್ರಾಪಂ ಅಧ್ಯಕ್ಷ ಪರಸಪ್ಪ, ಮಲ್ಲಿಕಾರ್ಜುನ, ಮಾರುತಿ, ಚಂದ್ರ ಸೇರಿದಂತೆ ಇತರರು ಇದ್ದರು,