ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.18 : ಭವ್ಯ ಇತಿಹಾಸ ಪರಂಪರೆಯಿರುವ ಉಪ್ಪಾರ ಜನಾಂಗ ಅತ್ಯಂತ ಹಿಂದುಳಿದಿರುವುದರಿಂದ ಮೀಸಲಾತಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೊಸದುರ್ಗ ಬ್ರಹ್ಮವಿದ್ಯಾನಗರದ ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.
ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆ ಭಾನುವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ ಉಮಾಪತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಫೆ. 28, 29 ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ ಪ್ರಧಾನಿ ನರೇಂದ್ರಮೋದಿರವರನ್ನು ಆಹ್ವಾನಿಸಿ ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೊತ್ತಾಯಿಸಲಾಗುವುದು. ಅದಕ್ಕಾಗಿ ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಉಪ್ಪಾರ ಜನಾಂಗ ಭಾಗವಹಿಸುವಂತೆ ಮನವಿ ಮಾಡಿದರು.
ಚಿನ್ನಪ್ಪರೆಡ್ಡಿ, ವೆಂಕಟಸ್ವಾಮಿ, ನಂಜುಂಡಪ್ಪ, ಕಾಂತರಾಜ್ ವರದಿಯನ್ವಯ ಉಪ್ಪಾರ ಸಮಾಜ ಅತ್ಯಂತ ಹಿಂದುಳಿದಿದೆ. ಕರ್ನಾಟಕದಲ್ಲಿ ಉಪ್ಪಾರ ಅಭಿವೃದ್ದಿ ನಿಗಮ ಸ್ಥಾಪನೆಯಾಗಬೇಕು. ದೇಶದ ಎಲ್ಲಾ ರಾಜ್ಯಗಳಲ್ಲಿ ಸರ್ಕಾರವೇ ಉಪ್ಪಾರ ಜಯಂತಿಯನ್ನು ಆಚರಿಸಬೇಕು. ಹಾಗಾಗಿ ಭಗೀರಥ ಭಾರತ ಜನಕಲ್ಯಾಣ ಯಾತ್ರೆ ಈಗಾಗಲೆ ಹಲವಾರು ರಾಜ್ಯಗಳಲ್ಲಿ ಸಂಚರಿಸಿ ಕರ್ನಾಟಕ್ಕೆ ಬಂದಿದೆ. ಫೆ.ವರೆಗೆ ದೇಶಾದ್ಯಂತ ಸುತ್ತಾಡಿ ಉಪ್ಪಾರ ಸಮಾಜವನ್ನು ಜಾಗೃತಗೊಳಿಸುವುದು ರಥಯಾತ್ರೆಯ ಉದ್ದೇಶ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಈ ತಿಂಗಳ ಅಂತ್ಯದೊಳಗೆ ಕುಲಶಾಸ್ತ್ರೀಯ ಅಧ್ಯಯನ ವರದಿ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ. ಉಪ್ಪಾರ ಸಮಾಜವನ್ನು ಪರಿಶಿಷ್ಟರ ಮೀಸಲಾತಿ ಪಟ್ಟಿಯಲ್ಲಿ ಸೇರಿಸಬೇಕೆಂಬುದು ನಮ್ಮ ಒತ್ತಾಯ. ಭಗೀರಥ ಗುರುಪೀಠದ ಎದುರು 60 ಅಡಿ ಎತ್ತರದ ಭಗೀರಥ ಮಹರ್ಷಿಯ ಏಕಶಿಲಾ ಮೂರ್ತಿಯನ್ನು ನಿರ್ಮಿಸಿ ಉಪ್ಪಾರರ ಸಂಸ್ಕøತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಲಾಗುವುದು. ಥೀಮ್ ಪಾರ್ಕ್ ಮಾಡಲು ಯೋಜನೆ ರೂಪಿಸಲಾಗಿದೆ. ಅಂದಾಜು 25 ಕೋಟಿ ರೂ.ವೆಚ್ಚವಾಗಲಿದ್ದು, ಜನಾಂಗದವರು ತನು, ಮನ, ಧನವನ್ನು ಅರ್ಪಿಸುವಂತೆ ಡಾ.ಪುರುಷೋತ್ತಮಾನಂದ ಸ್ವಾಮೀಜಿ ವಿನಂತಿಸಿದರು.
ನಿಮ್ಮ ಭವಿಷ್ಯವನ್ನು ನೀವುಗಳೆ ರೂಪಿಸಿಕೊಳ್ಳಬೇಕು. ಮತ್ತೊಬ್ಬರನ್ನು ನಂಬಿ ಕುಳಿತರೆ ಉಪಯೋಗವಿಲ್ಲ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ. ವಿದ್ಯೆಯ ಜೊತೆಗೆ ಸಂಸ್ಕಾರ, ವಿನಯವಂತಿಕೆಯನ್ನು ಕಲಿಸಿ. ಮಾನವೀಯ ಮೌಲ್ಯವನ್ನು ಬೆಳೆಸಿಕೊಂಡು ಎಲ್ಲಾ ಜಾತಿಯವರೊಂದಿಗೆ ಸೌಹಾರ್ಧತೆಯಿಂದ ಬದುಕಬೇಕಿದೆ ಎಂದು ಉಪ್ಪಾರ ಜನಾಂಗಕ್ಕೆ ಸ್ವಾಮೀಜಿ ಕರೆ ನೀಡಿದರು.
ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ವೀರೇಶ್, ಗೌರವಾಧ್ಯಕ್ಷ ನಿವೃತ್ತ ಡಿ.ವೈ.ಎಸ್ಪಿ. ಎಸ್.ನಾಗರಾಜ್, ತಾಲ್ಲೂಕು ಅಧ್ಯಕ್ಷ ಸಿದ್ದಪ್ಪ, ನಗರಸಭಾ ಸದಸ್ಯೆ ಶ್ವೇತಾ ವೀರೇಶ್,
ಗೀತಾ ವೆಂಕಟೇಶ್, ದಿವ್ಯ, ಶಿವಾಜಿ ಚೌಹ್ಹಾಣ್, ನವದೆಹಲಿಯ ಮೆಹತೋ ಚೌವ್ಹಾಣ್, ರಾಜಸ್ಥಾನದ ನಾರಾಯಣ್ ಮಾಲಿ, ಮಗನ್‍ಬಾಮಿ ಸಾಗರ್, ಲಕ್ಷ್ಮಣ್ ಬಾಮಿ ಸಾಗರ್ ವೇದಿಕೆಯಲ್ಲಿದ್ದರು.