ಶಿವಮೊಗ್ಗ: ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಿಸುತ್ತಿದ್ದಾರೆ. ಇಂದು ಮತ್ತೆ ಶಿವಮೊಗ್ಗ ಜಿಲ್ಲೆಯ ಹಲವೆಡೆ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅಂತರಗಂಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಮನೆ ಮೇಲೂ ದಾಳಿ ನಡೆಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ನಗದು, ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗೇಶ್ ಬಿ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಗಳಿಸಿದ್ದಾರೆಂದು ದೂರು ಬಂದಿತ್ತು. ಇದರ ಹಿನ್ನೆಲೆ ಶಿವಮಿಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಅಧಿಕಾರಿಗಳು ಇವರಿಗೆ ಸಂಬಂಧಿಸಿದ ಐದು ಕಡೆಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ ನಾಗೇಶ್ ಅವರಿಗೆ ಸಂಬಂಧ ಪಟ್ಟ ಜಮೀನು, ನಿವೇಶನ, ಚಿನ್ನಾಭರಣ, ಬೆಳ್ಳಿ, ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಪ್ರಕಾಶ್ ಜಿ.ಎನ್ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರುವ ದೂರಿನ ಆಧಾರದ ಮೇಲೆ ದಾಳಿ ನಡೆಸಿದ್ದಾರೆ. ಜುಲೈ 19ರಂದೇ ಸ್ಥಳ ಶೋಧನೆ ಮಾಡಿದ್ದರು. ಪ್ರಕಾಶ್ ಅವರುಗೆ ಸಂಬಂಧಪಟ್ಟ ಖಾಲಿ ನಿವೇಶನ, ಮನೆ, ಜಮೀನು, ಸ್ಥಿರಾಸ್ತಿ, ಚಿನ್ನಾಭರಣ, ಬೆಳ್ಳು ವಸ್ತುಗಳು, ವಾಹನಗಳನ್ನು ವಶಕ್ಕೆ ಪಡೆದಿದ್ದರು. ಇದೀಗ ಪ್ರಕಾಶ್ ಅವರ ಪತ್ನಿಯ ಹೆಸರಲ್ಲಿದ್ದ ಬ್ಯಾಂಕ್ ಲಾಕರ್ ಅನ್ನು ಶೋಧನೆ ಮಾಡಲಾಗಿದೆ. ಅಲ್ಲಿಯೂ ನಗದು, ಚಿನ್ನಾಭರಣ, ಅಕ್ರಮ ಆಸ್ತಿ ಪತ್ರಗಳು ಪತ್ತೆಯಾಗಿರುವುದು ಕಂಡು ಬಂದಿದೆ. ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.