ಬೆಂಗಳೂರು: ತೆರಿಗೆ ಹಣವನ್ನ ಕಟ್ಟದೆ ಇರೋ ಕಾರಣ ಮಂತ್ರಿ ಮಾಲ್ ಗೆ ಪದೇ ಪದೇ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿಯುತ್ತಿದ್ದಾರೆ. ಇಂದು ಕೂಡ ಮಂತ್ರಿ ಮಾಲ್ ಗೆ ಭೇಟಿ ನೀಡಿದ ಅಧಿಕಾರಿಗಳು ಬೀಗ ಹಾಕಿದ್ದಾರೆ.
22 ಕೋಟಿ ತೆರಿಗೆ ಹಣ ಬಾಕಿ ಉಳಿಸಿಕೊಂಡಿರೋ ಹಿನ್ನೆಲೆ ಇಂದು ಬಿಬಿಎಂಪಿ, ಮಂತ್ರಿ ಮಾಲ್ ವಿರುದ್ಧ ಕ್ರಮ ಕೈಗೊಂಡಿದೆ. ಕಳೆದ ಮೂರು ವರ್ಷದಿಂದ ಟ್ಯಾಕ್ಸ್ ಕಟ್ಟದ ಮಾಲ್ ಮುಂದೆ ಹೋಗಿ ಅಧಿಕಾರಿಗಳು ಅಡ್ಡಲಾಗಿ ನಿಂತಿದ್ದಾರೆ. ಮಾಲ್ ಒಳಗೆ ಯಾರು ಹೋಗದಂತೆ ತಡೆದಿದ್ದಾರೆ. ಮಂತ್ರಿ ಮಾಲ್ 27 ಕೋಟಿ ಬಾಕಿ ಉಳಿಸಿಕೊಂಡಿದೆ. ಬಡ್ಡಿ ಎಲ್ಲಾ ಸೇರಿ 36 ಕೋಟಿ ಹಣ ಕಟ್ಟಬೇಕಾಗಿದೆ.
ಕಳೆದ ಬಾರಿಯೂ ಹೀಗೆ ಆಗಿತ್ತು. ತೆರಿಗೆ ಹಣ ಕಟ್ಟದ ಮಾಲ್ ಗೆ ಅಧಿಕಾರಿಗಳು ದಾಳಿ ಮಾಡಿದಾಗ ಸ್ಥಳದಲ್ಲೆ 5 ಕೋಟಿ ಹಣ ನೀಡಿ, ಕಾಲಾವಕಾಶ ತೆಗೆದುಕೊಂಡಿದ್ದರು. ಇದೀಗ ಬಿಬಿಎಂಪಿ ನೀಡಿದ ಕಾಲಾವಕಾಶ ಮುಗಿದಿದ್ದು, ಮತ್ತೆ ಬೀಗ ಜಡಿದಿದ್ದಾರೆ. ಸ್ಥಳದಲ್ಲಿರುವ ಅಧಿಕಾರಿಗಳು ಬಾಕಿ ಕಟ್ಟದೇ ಇದ್ದರೆ ಮಾಲ್ ಒಳಗೆ ಯಾರನ್ನು ಬಿಡಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ.