ರಾಯಚೂರು: ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ವಾಹನ ಅಪಘಾತಕ್ಕೀಡಾಗಿ ಚಾಲಕ, ವಿದ್ಯಾರ್ಥಿಗಳು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕ್ರೂಶರ್ ವಾಹನದ ಚಾಲಕನಾಗಿದ್ದ 20 ವರ್ಷದ ಶಿವು ಹಾಗೂ ವಿದ್ಯಾರ್ಥಿಗಳಾದ 18 ವರ್ಷದ ಹಯವದನ, 22 ವರ್ಷದ ಸುಜಯೇಂದ್ರ, 20 ವರ್ಷದ ಅಭಿಲಾಶ್ ಸಾವನ್ನಪ್ಪಿದ್ದಾರೆ.

ಸಿಂಧನೂರು ನಗರದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕ್ರೂಶರ್ ವಾಹನದಲ್ಲಿ ಸುಮಾರು 14 ಜನ ಪ್ರಯಾಣ ಮಾಡ್ತಾ ಇದ್ದರು. ಮಂತ್ರಾಲಯದಿಂದ ಹೊರಟು ಕೊಪ್ಪಳದ ಆನೆಗುಂದಿಯ ನರಹರಿ ತೀರ್ಥರ ವೃಂದಾವನಕ್ಕೆ ತೆರಳುತ್ತಿದ್ದರು. ಕ್ರೂಶರ್ ಬಹಳ ವೇಗದಲ್ಲಿ ಚಲಿಸುತ್ತಿತ್ತು. ಆದ ಕಾರಣ ಸಿಂಧನೂರು ಹೊರವಲಯದಲ್ಲಿ ಆಕ್ಸಲ್ ಕಟ್ ಆಗಿ ಭೀಕರ ಅಪಘಾತವಾಗಿದೆ. ಕ್ರೂಶರ್ ಮೂರು ಬಾರಿ ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಚಾಲಕ, ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಬಲಿಯಾಗಿದ್ದಾರೆ. ಇನ್ನುಳಿದ ಹತ್ತು ಮಂದಿಗೆ ಗಾಯವಾಗಿದೆ. ತಕ್ಷಣ ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಹಾಗೂ ಅತಿಯಾದ ವೇಗವೇ ಕಾರಣ ಎಂದು ತಿಳಿದು ಬಂದಿದೆ.
ಇನ್ನು ಘಟನೆ ತಿಳಿದ ಕೂಡಲೇ ಮಂತ್ರಾಲಯ ಸ್ವಾಮಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿರುವ ಗಾಯಾಳುಗಳಿಗೆ ಒಳ್ಳೆಯ ಚಿಕಿತ್ಸೆ ಕೊಡಿಸಲು ಸೂಚಿಸಿದ್ದಾರೆ. ಆದಷ್ಟು ಬೇಗ ಗಾಯಾಳುಗಳು ಚೇತರಿಸಿಕೊಳ್ಳಲಿ ಎಂದು ಸ್ವಾಮಿಗಳು ಹಾರೈಸಿದ್ದಾರೆ. ಈ ಸಂಬಂಧ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ವಿದ್ಯಾರ್ಥಿಗಳು ಕೂಡ ಈ ಅಪಘಾತದಲ್ಲಿ ಸಾವನ್ನಪ್ಪಿದ್ದು ಸಹ ವಿದ್ಯಾರ್ಥಿಗಳ ಗೋಳು ನೋಡುವುದಕ್ಕೆ ಆಗುತ್ತಿಲ್ಲ. ನಾಲ್ಕು ಜನ ಈಗಿನ್ನು ಭವಿಷ್ಯ ಕಟ್ಟಿಕೊಳ್ಳುವ ವಯಸ್ಸು. ಆದರೆ ವಿಧಿ ಇಷ್ಟಕ್ಕೆ ಆಯಸ್ಸು ಮುಗಿಸಿದೆ.


