ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ,(ನ.12): ಮನುಷ್ಯನ ಸ್ವಾರ್ಥ, ದುರಾಸೆಯಿಂದ ಪಕ್ಷಿ, ಪ್ರಾಣಿ ಸಂಕುಲಗಳು ನಾಶವಾಗತ್ತಿವೆ. ಮಾಂಸಕ್ಕಾಗಿ ಪಕ್ಷಿಗಳನ್ನು ಕೊಲ್ಲಬೇಡಿ. ಪಕ್ಷಿ ಪ್ರೇಮಿಗಳಾಗಿ ಅಪರೂಪದ ಪಕ್ಷಿ ಸಂಕುಲಗಳನ್ನು ಉಳಿಸುವಂತೆ ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ಮನವಿ ಮಾಡಿದರು.
ಚಿತ್ರದುರ್ಗ ವಿಜ್ಞಾನ ಕೇಂದ್ರ ಹಾಗೂ ವಿದ್ಯಾವಿಕಾಸ ವಿದ್ಯಾ ಸಂಸ್ಥೆ ಸಹಯೋಗದೊಂದಿಗೆ ಪಕ್ಷಿಪ್ರೇಮಿ ಸಲೀಂ ಅಲಿ ಇವರ 125 ನೇ ಜನ್ಮದಿನಾಚರಣೆ ಪ್ರಯುಕ್ತ ವಿದ್ಯಾವಿಕಾಸ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಹಕ್ಕಿಯ ಹಾಡು-ಅಳಲು ಕಾರ್ಯಕ್ರಮವನ್ನು ವಿದ್ಯಾವಿಕಾಸ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಂಪತ್‍ಕುಮಾರ್ ಸಿ.ಡಿ.ರವರಿಗೆ ಹಕ್ಕಿಗೂಡು ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಿಸರ್ಗದಲ್ಲಿ ಪ್ರಾಣಿ, ಪಕ್ಷಿಗಳ ಪಾತ್ರ ಏನು ಎಂದು ಮಾನವ ತಿಳಿದುಕೊಂಡಾಗ ಮಾತ್ರ ಪರಿಸರ ಚೆನ್ನಾಗಿರುತ್ತದೆ. ಪ್ರಕೃತಿ ಉಳಿಸಿಕೊಂಡರೆ ಮನುಕುಲ ಉಳಿಯುತ್ತದೆ. ಇಲ್ಲವಾದಲ್ಲಿ ಯಾರು ಉಳಿಯುವುದಿಲ್ಲ. ಹತ್ತು ಸಾವಿರ ಕಿ.ಮೀ.ವಲಸೆ ಹೋಗುವ ಶಕ್ತಿ ಪಕ್ಷಿಗಳಿಗಿದೆ. ಹಕ್ಕಿಗಳ ಕಲರವ ಗಾನದಿಂದ ಸಂಗೀತ ಹುಟ್ಟಿಕೊಂಡಿದೆ. ಅದ್ಬುತವಾದ ಪಕ್ಷಿಗಳ ಲೋಕವನ್ನು ನೋಡಿ ಮನುಷ್ಯ ಆನಂದಿಸಿ, ಖುಷಿ ಪಡಬೇಕಿದೆ ಎಂದು ಹೇಳಿದರು.
ವಿದ್ಯಾವಿಕಾಸ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಂಪತ್‍ಕುಮಾರ್ ಸಿ.ಡಿ. ಮಾತನಾಡಿ ಪಕ್ಷಿಗಳ ಪ್ರಬೇಧ ಬಿಡಿಸಿ ಮೊದಲು ಮಾಹಿತಿ ನೀಡಿದ್ದು, ಸಲೀಂಅಲಿ ಪಕ್ಷಿಗಳ ಫೋಟೋ ತೆಗೆಯುವುದು ಸುಲಭದ ಸಾಧನೆಯಲ್ಲ. ದಿನವಿಡಿ ಕಾಯುವ ತಾಳ್ಮೆ ಬೇಕು. ಪರಿಸರ, ಪಕ್ಷಿ, ಪ್ರಾಣಿಗಳ ಬಗ್ಗೆ ಶಾಲಾ ಮಕ್ಕಳಿಗೆ ಪರಿಚಯಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ತಿಳಿಸಿದರು.
ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ ಮಾತನಾಡುತ್ತ ಮನುಷ್ಯನ ಮೌಢ್ಯದಿಂದ ಬಹಳಷ್ಟು ಪಕ್ಷಿಗಳು ನಾಶವಾಗುತ್ತಿವೆ. ಒಂದು ಪಕ್ಷಿಯ ಬೆನ್ನತ್ತಿ ಹೋದರೆ ಇಡಿ ಪಕ್ಷಿಯ ಜಿಯೋಗ್ರಫಿ ಅರ್ಥವಾಗುತ್ತದೆ. ಬೇಸಿಗೆಯಲ್ಲಿ ಮನೆಗಳ ಮುಂದೆ ಆಹಾರ ನೀರು ಇಡುವ ಮೂಲಕ ಪಕ್ಷಿಗಳನ್ನು ಉಳಿಸಬೇಕಿದೆ ಎಂದು ವಿನಂತಿಸಿದರು.
ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ರಮೇಶ್‍ಐನಹಳ್ಳಿ ಮಾತನಾಡಿ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸುವ ಕಾಳಜಿಯೂ ದೊಡ್ಡ ಸಾಧನೆ. 1896 ನ.12 ರಂದು ಬಾಂಬೆಯಲ್ಲಿ ಜನಿಸಿದ ಪಕ್ಷಿ ಪ್ರೇಮಿ ಸಲೀಂ ಅಲಿ ಬರ್ಡ್ ಮ್ಯಾನ್ ಆಫ್ ಇಂಡಿಯಾ ಎಂದು ಕರೆಸಿಕೊಂಡಿದ್ದಾರೆ.
ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿಗಳ ಕುರಿತು ಮಾಹಿತಿ ತಿಳಿದುಕೊಂಡಿರಬೇಕು. ಸಲೀಂ ಅಲಿ ಎಲ್ಲಾ ಬಗೆಯ ಪಕ್ಷಿಗಳ ಸಂಬಂಧ ಡಾಕ್ಯುಮೆಂಟ್ ಮಾಡಿದ್ದಾರೆ. ಪಕ್ಷಿಗಳನ್ನು ಅಧ್ಯಯನ ಮಾಡುವ ಮೂಲಕ ಪಕ್ಷಿ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಹಾರಾಡುವ ಶಕ್ತಿಯಿರುವ ಪಕ್ಷಿಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗಿ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಅದಕ್ಕಾಗಿ ಪ್ರಾಣಿ ಪಕ್ಷಿ ಸಂಕುಲಗಳನ್ನು ರಕ್ಷಿಸಬೇಕಿದೆ ಎಂದರು.
ವಿದ್ಯಾವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ವಿಜಯಕುಮಾರ್, ಪಕ್ಷಿಪ್ರೇಮಿ ಹಾಗೂ ವನ್ಯಜೀವಿ ಛಾಯಾಚಿತ್ರಗಾಹಕ ಕಾರ್ತಿಕ್ ಎಂ, ಚಿತ್ರದುರ್ಗ ವಿಜ್ಞಾನ ಕೇಂದ್ರದ ಹಿರಿಯ ಸದಸ್ಯ ಎಂ.ಬಿ.ಜಯದೇವಮೂರ್ತಿ ವೇದಿಕೆಯಲ್ಲಿದ್ದರು.