ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 28: ಆರ್ಥಿಕ ತಜ್ಞ, ಮಾಜಿ ಪ್ರಧಾನಮಂತ್ರಿಗಳಾಗಿದ್ದ ಮನಮೋಹನ್ ಸಿಂಗ್ ಅವರು ಈಗ ನಮ್ಮೊಡನೆ ಇಲ್ಲ. ಅವರ ನೆನಪುಗಳು ಮಾತ್ರ. ಅವರ ಸಾಧನೆಗಳು ಮಾತ್ರ. ಅಂಥ ಸರಳ ಸಜ್ಜನಿಕೆಯ, ಸೂಕ್ಷ್ಮ ಮನಸ್ಸಿನ ರಾಜಕಾರಣಿ ನಮ್ಮೂರಿಗೂ ಬಂದಿದ್ದರಲ್ಲ ಎಂಬುದೇ ಕೋಟೆನಾಡಿನ ಮಂದಿಯ ಸೌಭಾಗ್ಯ. ಹೌದು, 1994ರಲ್ಲಿ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಮಹಿಳೆಯರೇ ನಿಜವಾದ ಆರ್ಥಿಕ ತಜ್ಞರು ಎಂದು ಬಣ್ಣಿಸಿ ಅವರಲ್ಲಿ ಉಳಿತಾಯ, ಹೂಡಿಕೆ ಜ್ಞಾನ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಿದ್ದರು. ಅಂದು ರಾಜ್ಯದಲ್ಲಿಯೇ ಪ್ರಥಮ ಮಹಿಳಾ ಬ್ಯಾಂಕ್ ಉದ್ಘಾಟನೆ ಮಾಡಿದ್ದರು. ಒನಕೆ ಓಬವ್ವ ಮಹಿಳಾ ಬ್ಯಾಂಕ್ ಉದ್ಘಾಟಿಸಿ, ಬಹಳ ಹೊತ್ತು ಕೋಟೆನಾಡಿನಲ್ಲಿ ಕಾಲ ಕಳೆದಿದ್ದರು.
ಜೊತೆಗೆ ಹಣಕಾಸು ವಹಿವಾಟು ಪಾರದರ್ಶಕವಾಗಿರಬೇಕು. ಎಲ್ಲಿಯೂ ಸಣ್ಣ ಲೋಪ ಆಗದಂತೆ ಎಚ್ಚರವಹಿಸಬೇಕು. ಆಗ ಮಾತ್ರ ಷೇರುದಾರರ ಜೊತೆಗೆ ಬ್ಯಾಂಕ್ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದ್ದರು. ಅಂದು ರಾಜ್ಯದ ಅನೇಕ ಜನಪ್ರತಿನಿಧಿಗಳು, ರಾಜಕಾರಣಿಗಳು, ಚಿಂತಕರು ಸಮಾರಂಭದಲ್ಲಿ ಪಾಲ್ಗೊಂಡು ಆರ್ಥಿಕತಜ್ಞ ಸಿಂಗ್ ಜೊತೆಗೆ ಫೋಟೋಗೆ ಫೋಸ್ ಕೊಟ್ಟಿದ್ದರು. 10 ವರ್ಷದ ಬಳಿಕ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಸಿಂಗ್ ಅವರನ್ನು ಮತ್ತೊಮ್ಮೆ ಚಿತ್ರದುರ್ಗಕ್ಕೆ ಕರೆಯಿಸಬೇಕೆಂಬ ದುರ್ಗದ ಜನರ ಆಸೆ ಕೊನೆಗೂ ಈಡೇರಲಿಲ್ಲ.
ಅಂದಿನ ದಿನಗಳನ್ನು ಕಾಂಗ್ರೆಸ್‌ನ ಹಿರಿಯ ಮುಖಂಡ ಹೆಚ್. ಹನುಮಂತಪ್ಪ, ಲೇಖಕ ಜಿ.ಎಸ್.ಉಜ್ಜನಿಪ್ಪ ಸೇರಿದಂತೆ ಹಲವರು ಮೆಲುಕು ಹಾಕಿದ್ದಾರೆ. ಮನಮೋಹನ್ ಸಿಂಗ್ ಅತ್ಯಂತ ಸೂಕ್ಷ್ಮ ಮನಸ್ಸಿನ ರಾಜಕಾರಣಿ. ಹಲವು ಟೀಕೆ-ಟಿಪ್ಪಣಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದರು ಎಂದು ಎಚ್.ಹನುಮಂತಪ್ಪನವರು ನೆನಪು ಮಾಡಿಕೊಂಡಿದ್ದಾರೆ.
ಸರಸ್ವತಿ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಮಾತನಾಡಿ, ಹಣಕಾಸು ಸಚಿವರಾಗಿದ್ದ ಸಂದರ್ಭ ತಮ್ಮದಲ್ಲದ ತಪ್ಪಿಗೆ ಟೀಕೆ ಕೇಳಿ ಬರುತ್ತಿದ್ದಂತೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ವಿಷಯನ್ನು ಬಿಚ್ಚಿಟ್ಟರು. ಅವರೊಬ್ಬ ಜಗತ್ತಿನ ಬಹುದೊಡ್ಡ ಆರ್ಥಿಕ ಚಿಂತಕ. ಅವರ ಅವಧಿಯಲ್ಲಿ ಭಾರತ ಆರ್ಥಿಕ ಚೇತರಿಕೆ ಕಂಡಿತು. ಅನೇಕ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ ವಿಶೇಷ ವ್ಯಕ್ತಿ ಎಂದು ಬಣ್ಣಿಸಿದರು. ಅವರೊಂದಿಗೆ ಅತ್ಯಂತ ಆತ್ಮೀಯತೆ ಹೊಂದಿದ್ದ ನಾನು, ಅವರ ಬಳಿ ಹೋಗಿ ಸಂಸದರು ಕ್ಷೇತ್ರದಲ್ಲಿ ಏನಾದ್ರೂ ಅಭಿವೃದ್ಧಿ ಕೆಲಸ ಮಾಡಲು ಇಂತಿಷ್ಟು ಅನುದಾನ ನೀಡುವಂತೆ ಮನವಿ ಮಾಡಿದ್ದೇ. ತಕ್ಷಣವೇ ದೇಶದ ಎಲ್ಲ ಸಂಸದರಿಗೂ ತಮ್ಮ ಕ್ಷೇತ್ರ ವ್ಯಾಪ್ತಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪ್ರತಿ ವರ್ಷ 50 ಲಕ್ಷ ರೂ. ಅನುದಾನ ಕೊಡುವ ಪದ್ಧತಿ ಜಾರಿಗೊಳಿಸಿದರು. ಅದಕ್ಕೆ ಪ್ರಧಾನಿ ಪಿ.ವಿ.ನರಸಿಂಹರಾವ್ ಒಪ್ಪಿಗೆ ಸೂಚಿಸಿದರು. ಬಳಿಕ ಇದೇ ಮಾದರಿಯನ್ನು ರಾಜ್ಯ ಸರ್ಕಾರಗಳು ತಮ್ಮ ಶಾಸಕರುಗಳಿಗೆ ಅನದಾನ ನೀಡುವ ಯೋಜನೆ ಜಾರಿಗೆ ತಂದರು. ಈಗ ಅದರ ಮೊತ್ತ ಹೆಚ್ಚಾಗಿದೆ. ಇದಕ್ಕೆಲ್ಲ ಮೂಲ ಕಾರಣಕರ್ತರು ಸಿಂಗ್-ನರಸಿಂಹರಾವ್ ಎಂದು ಸ್ಮರಿಸಿದರು. ಲೇಖಕ ಜಿ.ಎಸ್.ಉಜ್ಜನಿಪ್ಪ ಇತರರಿದ್ದರು.