ರಾಮನಗರ: ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಶುರುವಾಗೋದು ಗ್ಯಾರಂಟಿ. ಟಿಕೆಟ್ ಸಿಗದವರು, ಅತೃಪ್ತಿ ಇರುವವರು ಹೀಗೆ ನಾನಾ ಕಾರಣದಿಂದ ಇರುವ ಪಕ್ಷ ತೊರೆದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ಇದೀಗ ಮಾಗಡಿ ವಿಧಾನಸಭಾ ಕ್ಷೇತ್ರದ ಮಂಜುನಾಥ್ ಜೆಡಿಎಸ್ ತೊರೆಯುವ ಎಲ್ಲಾ ಸಾಧ್ಯತೆಯೂ ಕಾಣುತ್ತಿದೆ. ಈ ಬಗ್ಗೆ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ಹೊಸ ಬಾಂಬ್ ಒಂದನ್ನು ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಾಲಕೃಷ್ಣ ಅವರು, ಶಾಸಕ ಎ ಮಂಜುನಾಥ್ ಬಿಜೆಪಿ ಸೇರುವುದಕ್ಕೆ ರೆಡಿಯಾಗಿದ್ದಾರೆ. ಅವರು ಭಯದಿಂದ ಜೆಡಿಎಸ್ ನಲ್ಲಿದ್ದಾರೆ ವಿನಃ ಗೌರವದಿಂದ ಅಲ್ಲ. ಈಗಾಗಲೇ ಮಂಜುನಾಥ್ ಅವರು ಕೂಡ ನಾನು ಜೆಡಿಎಸ್ ಗೆ ರಾಜೀನಾಮೆ ನೀಡಿ, ಬಿಜೆಪಿಯಿಂದ ಈ ಬಾರಿಯ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಈ ವಿಚಾರ ಸತ್ಯವೋ.. ಸುಳ್ಳೋ ಅವರೇ ಹೇಳಬೇಕು. ಬಿಜೆಪಿ ಸೇರುವುದಕ್ಕಂತೂ ರೆಡಿಯಾಗಿದ್ದಾರೆ. ಮಾಜಿ ಸಚಿವ ಸಿಪಿ ಯೋಗೀಶ್ವರ್ ಜೊತೆಗೆ ಈಗಾಗಲೇ ಮಾತುಕತೆ ಕೂಡ ನಡೆಸಿದ್ದಾರೆ ಎಂದಿದ್ದಾರೆ.
ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ಜೊತೆಗೆ ಓಡಾಡುವುದನ್ನು ಗಮನಿಸಿದರೆ ಯಾವಾಗ ಕಾಲು ಕೀಳುತ್ತಾರೋ ಗೊತ್ತಿಲ್ಲ. ಮಂಜುನಾಥ್ ಅವರ ಮೇಲೆ ಕುಮಾರಸ್ವಾಮಿ ಅವರಿಗೂ ಸಂಪೂರ್ಣ ವಿಶ್ವಾಸವಿಲ್ಲ. ಆದರೆ ಮಾಗಡಿಯಿಂದ ಸ್ಪರ್ಧಿಸುವುದಕ್ಕೆ ಯಾರು ಅಭ್ಯರ್ಥಿ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಮಂಜುನಾಥ್ ಅವರನ್ನು ಇಟ್ಟುಕೊಂಡಿದ್ದಾರೆ ಎಂದು ಅವರೇ ಕೆಲವು ಕಡೆ ಹೇಳಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.