ಮಂಡ್ಯ: ಕಾವೇರಿ ನೀರು ಉಳಿವಿಗಾಗಿ ರೈತರು ಉಗ್ರ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಪದೇ ಪದೇ ಸೋಲಾಗುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯಕ್ಕೆ ಕೆಆರ್ಎಸ್ ನಲ್ಲಿರುವ ಕಾವೇರಿ ನೀರು ತೀರಾ ಕಡಿಮೆ ಇದೆ. ಹೀಗಿರುವಾಗ ರಾಜ್ಯಕ್ಕೇನೆ ನೀರು ಸಾಕಾಗುವುದಿಲ್ಲ. ರಾಜ್ಯದ ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ರೈತರು ಕೆಂಡಾಮಂಡಲರಾಗಿದ್ದಾರೆ.
ಕಾವೇರಿ ನೀರಿಗಾಗಿ ನಾಳೆ ಉಗ್ರ ಹೋರಾಟ ಮಾಡಲು ರೈತರು ಸಜ್ಜಾಗಿದ್ದಾರೆ. ಮಂಡ್ಯ ಬಂದ್ ಮಾಡಿ ಆಕ್ರೋಶ ಹೊರ ಹಾಕಲಿದ್ದಾರೆ. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ವೇದಿಕೆ, ರೈತ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಬಂದ್ ಆಚರಿಸಲಿವೆ.
ಈ ವೇಳೆ ಪ್ರತಿಭಟನೆ ವೇಳೆ ಮೆರವಣಿಗೆ ಇರುವ ಕಾರಣ ವಾಹನ ಸಂಚಾರಕ್ಕೆ ಸಮಸ್ಯೆ ಆಗುವ ಸಾಧ್ಯತೆ ಇದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿರುವ ಮಂಡ್ಯ ರೈತರು ಬಂದ್ ಗೆ ಕರೆ ನೀಡಿದ್ದಾರೆ. ಈ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು ಸೇರಿದಂತೆ ಬಹುತೇಕ ಎಲ್ಲಾ ಸಂಘಟನೆಗಳು ಬೆಂಬಲ ನೀಡಿವೆ.