ಮಮತಾ ಬ್ಯಾನರ್ಜಿ ತಲೆಗೆ ಗಂಭೀರ ಗಾಯ : ರಕ್ತಸ್ರಾವದ ಫೋಟೋವನ್ನು  ಬಿಡುಗಡೆ ಮಾಡಿದ ಟಿಎಂಸಿ

ಮಮತಾ ಬ್ಯಾನರ್ಜಿ : ಲೋಕಸಭೆ ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ  ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ತೃಣಮೂಲ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಮಾಹಿತಿ ನೀಡಿದೆ. ಟಿಎಂಸಿ ಟ್ವೀಟ್‌ನೊಂದಿಗೆ ಮಮತಾ ಬ್ಯಾನರ್ಜಿ ಅವರ ಫೋಟೋವನ್ನು ಸಹ ಹಂಚಿಕೊಂಡಿದೆ. ಆ ಫೋಟೋದಲ್ಲಿ, ಮಮತಾ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾರೆ. ತಲೆಗೆ ಗಂಭೀರ ಗಾಯವಾಗಿದೆ. ಗಾಯದಿಂದ ರಕ್ತ ಹರಿಯುತ್ತಿದೆ. ಹಣೆಯಿಂದ, ಕಣ್ಣುಗಳಿಂದ, ಮೂಗು ಮತ್ತು ಬಾಯಿಯ ಮೂಲಕ ಕತ್ತಿನವರೆಗೂ ರಕ್ತ ಸೋರುತ್ತಿರುವುದು ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಮಮತಾ ಬ್ಯಾನರ್ಜಿ ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ದೀದಿ ಅವರ ಆರೋಗ್ಯದ ಬಗ್ಗೆ ಟಿಎಂಸಿ ಟ್ವೀಟ್ ಮಾಡಿದೆ. ಮಮತಾ ಬ್ಯಾನರ್ಜಿ ಶೀಘ್ರವಾಗಿ ಚೇತರಿಸಿಕೊಳ್ಳಲು ಎಲ್ಲರೂ ಪ್ರಾರ್ಥಿಸೋಣ. ಆದರೆ ಅವರ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಪಕ್ಷದ ಮೂಲಗಳು ಚರ್ಚಿಸುತ್ತಿವೆ. ದೀದಿ ವ್ಯಾಯಾಮ ಮಾಡುವಾಗ ಕೆಳಗೆ ಬಿದ್ದಂತೆ ತೋರುತ್ತದೆ ಮತ್ತು  ಹಣೆಗೆ ಏನೋ ಪೆಟ್ಟಾಗಿದೆ.

ವ್ಯಾಯಾಮ ಮಾಡುವಾಗ ಕೆಳಗೆ ಬಿದ್ದ ಅವರನ್ನು  ಸೋದರಳಿಯ ಅಭಿಷೇಕ್ ಬ್ಯಾನರ್ಜಿ ತಕ್ಷಣವೇ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕರೆದೊಯ್ದರು ಎಂದು ಟಿಎಂಸಿ ಮೂಲಗಳು ತಿಳಿಸಿವೆ. ಪ್ರಸ್ತುತ ಎಸ್‌ಎಸ್‌ಕೆಎಂ ಆಸ್ಪತ್ರೆಯ ವೈದ್ಯರು ಮಮತಾ ಬ್ಯಾನರ್ಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಟಿಎಂಸಿ ಪಕ್ಷವು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

ತೃಣಮೂಲ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರು ಟ್ವಿಟ್ಟರ್ ನಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ದೀದಿ ಅವರು ಶೀಘ್ರವಾಗಿ ಆರೋಗ್ಯದಿಂದ ಮರಳಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಈ ವರ್ಷ ಮಮತಾ ಬ್ಯಾನರ್ಜಿ ಗಾಯಗೊಂಡಿರುವುದು ಇದು ಎರಡನೇ ಬಾರಿ. ಜನವರಿ ತಿಂಗಳಲ್ಲಿ ಬರ್ಧಮಾನ್ ಜಿಲ್ಲೆಯಿಂದ ಹಿಂದಿರುಗುತ್ತಿದ್ದಾಗ ಆಕೆಯ ಬೆಂಗಾವಲು ವಾಹನಕ್ಕೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ದೀದಿ ಅವರ ಹಣೆಯ ಮೇಲ್ಭಾಗದಲ್ಲಿ ಗಾಯವಾಗಿತ್ತು. ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ಸಿಎಂ ಕಾರಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಈ ಅವಘಡ ಸಂಭವಿಸಿತ್ತು. ಈ ಅಪಘಾತದಲ್ಲಿ ಮಮತಾ ಬ್ಯಾನರ್ಜಿ ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *