ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಸೂಕ್ತ ಎಂದ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್

ಸುದ್ದಿಒನ್, ನವದೆಹಲಿ, ಡಿಸೆಂಬರ್.19 : ಪ್ರತಿಪಕ್ಷಗಳ ಒಕ್ಕೂಟದ ಇಂಡಿಯಾ (INDIA) ನಾಲ್ಕನೇ ಸಭೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ, ಸಮ್ಮಿಶ್ರ ಪಕ್ಷಗಳ ನಡುವೆ ಸೀಟು ಹೊಂದಾಣಿಕೆ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ. ಇದೇ ವೇಳೆ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಆದರೆ ಖರ್ಗೆ ಇದನ್ನು ನಯವಾಗಿ ನಿರಾಕರಿಸಿದ್ದಾರೆ ಎನ್ನಲಾಗಿದೆ.

ವಾಸ್ತವವಾಗಿ, ಇಂಡಿಯಾ (INDIA)ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನು ಲೋಕಸಭೆ ಚುನಾವಣೆಯ ನಂತರವೇ ನಿರ್ಧರಿಸಲಾಗುವುದು ಎಂದು ಬಂಗಾಳದ ಸಿಎಂ ಸೋಮವಾರ ಪ್ರತಿಕ್ರಿಯಿಸಿದ್ದರು ಎಂಬುದು ಗಮನಾರ್ಹ.

ಮಲ್ಲಿಕಾರ್ಜುನ ಖರ್ಗೆದಲಿತ ಸಮುದಾಯದ ಪ್ರಮುಖ ನಾಯಕರಾಗಿರುವ ಕಾರಣ ದೀದಿ ಅವರ ಪ್ರಸ್ತಾವನೆಗೆ ವಿಶೇಷ ಸ್ಪಂದನೆ ದೊರೆತಂತಿದೆ. ಕಾಂಗ್ರೆಸ್ ನೀತಿಗಳನ್ನು ವಿರೋಧಿಸುತ್ತಿರುವ ದೆಹಲಿ ಸಿಎಂ ಕೇಜ್ರಿವಾಲ್ ಸೇರಿದಂತೆ 12 ಪಕ್ಷಗಳ ನಾಯಕರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಅಭಿಪ್ರಾಯಕ್ಕೆ ಖರ್ಗೆ ಅವರು ನಿರಾಕರಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ತಾನು ದೀನದಲಿತರಿಗಾಗಿ ಮಾತ್ರ ಕೆಲಸ ಮಾಡುತ್ತೇನೆಂದು ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ರಾಮನಾಥ್ ಕೋವಿಂದ್ ಮತ್ತು ದ್ರೌಪದಿ ಮುರ್ಮು ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಿದ್ದಕ್ಕಾಗಿ ಆಡಳಿತಾರೂಢ ಬಿಜೆಪಿಯಿಂದ ಪ್ರತಿಪಕ್ಷಗಳು ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ದಲಿತರು ಮತ್ತು ಆದಿವಾಸಿಗಳ ವಿರೋಧಿಗಳು ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿಗೆ ಕಡಿವಾಣ ಹಾಕಲು ದೀದಿ ಖರ್ಗೆ ಅವರ ಹೆಸರನ್ನು ತಂತ್ರಗಾರಿಕೆಯಿಂದ ಪ್ರಸ್ತಾಪಿಸಲಾಗಿದೆ.  ಸಂಖ್ಯಾಬಲ ಇಲ್ಲದೇ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸುವುದು ಸೂಕ್ತವಲ್ಲ ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಮೊದಲು ಗೆದ್ದ ನಂತರ ಪ್ರಧಾನಿ ಯಾರಾಗಬೇಕೆಂದು ನಿರ್ಧರಿಸುತ್ತೇವೆ ಎಂದು ಹೇಳಿರುವಂತಿದೆ. ಚುನಾವಣೆಯಲ್ಲಿ ಗೆದ್ದು ಸಂಸದರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *