ಸುದ್ದಿಒನ್ ವೆಬ್ ಡೆಸ್ಕ್
ನವ ದೆಹಲಿ : ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಸೇರಿದಂತೆ 47 ಸದಸ್ಯರನ್ನೊಳಗೊಂಡ ಚಾಲನಾ ಸಮಿತಿಯನ್ನು (Steering Committee)
ರಚಿಸಿದ್ದಾರೆ.
ರಾಜ್ಯದ ದಿನೇಶ್ ಗುಂಡುರಾವ್, ಕೆ. ಎಚ್. ಮುನಿಯಪ್ಪ ಮತ್ತು ಹೆಚ್. ಕೆ. ಪಾಟೀಲ್ ಅವರಿಗೂ ಈ ನೂತನ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಆದರೆ ಅವರ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಎದುರಾಳಿ ಶಶಿ ತರೂರ್ ಹೊಸ ಸಮಿತಿಯಲ್ಲಿ ಸ್ಥಾನ ಪಡೆಯದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಚಾಲನಾ ಸಮಿತಿ ಈ ಹಿಂದೆ ಅಸ್ತಿತ್ವದಲ್ಲಿ ಇದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಪರ್ಯಾಯವಾಗಿದೆ. ಈ ಸಮಿತಿಯು ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತದೆ.
ಮುಂದಿನ ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಅಧಿವೇಶನದಲ್ಲಿ ಕಾರ್ಯಕಾರಿ ಸಮಿತಿಯ ಹೊಸ ಸದಸ್ಯರನ್ನು ಆಯ್ಕೆ ಮಾಡಲಾಗುವುದು.
ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಸಭಾತ್ಯಾಗ ಮಾಡಿದರು. ವಾಡಿಕೆಯಂತೆ ಹೊಸ ಅಧ್ಯಕ್ಷರು ಆಯ್ಕೆಯಾದಾಗ ಅವರು ತಮ್ಮ ತಂಡವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡಲು ಈ ರೀತಿ ಮಾಡಲಾಗುತ್ತದೆ.
ಎಲ್ಲ ಸಿಡಬ್ಲ್ಯುಸಿ ಸದಸ್ಯರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಎಐಸಿಸಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ. ಎಲ್ಲಾ ಪದಾಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ಈಗ ಸಂಚಾಲನಾ ಸಮಿತಿಯಲ್ಲಿ ಸೇರಿಸಲಾಗಿದೆ.
ವಿಶೇಷ ಆಹ್ವಾನಿತರಾದ ಸಚಿನ್ ಪೈಲಟ್ ಮತ್ತು ದೀಪೇಂದ್ರ ಹೂಡಾ ಅವರನ್ನು ಸ್ಟೀರಿಂಗ್ ಕಮಿಟಿಯಲ್ಲಿ ಸೇರಿಸಿಲ್ಲ.
ನನಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿದೆ ಮತ್ತು ಅಗತ್ಯವಿದ್ದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸುತ್ತೇನೆ ಎಂದು ಖರ್ಗೆ ಹೇಳಿದ್ದಾರೆ.
ಅವರ ಸಲಹೆಯಿಂದ ಪಕ್ಷಕ್ಕೆ ಲಾಭವಾಗುತ್ತದೆ. ಹಾಗಾಗಿ ನಾನು ಖಂಡಿತವಾಗಿಯೂ ಅವರ ಸಲಹೆ ಮತ್ತು ಬೆಂಬಲವನ್ನು ಪಡೆಯುತ್ತೇನೆ. ಇದರಲ್ಲಿ ಯಾವುದೇ ಅವಮಾನವಿಲ್ಲ ಎಂದರು.