ಚಿತ್ರದುರ್ಗ, (ಅ.15): ದಶಕಗಳ ಕಾಲ ಶಾಸಕರಾಗಿ, ಸಂಸದರಾಗಿ ರಾಜ್ಯ, ಕೇಂದ್ರದಲ್ಲಿ ಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಗೆಲ್ಲುವುದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಹೋರಾಟದ ಹಿನ್ನೆಲೆ ಇದ್ದು, ಅಧ್ಯಕ್ಷ ಪದವಿಗೆ ಹೆಚ್ಚು ಗೌರವ ಇದೆ. ಇಂತಹ ಉನ್ನತ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದು, ಅವರ ಗೆಲುವು ರಾಷ್ಟ್ರದ ಹಿತದೃಷ್ಟಿಯಿಂದ ಇವರ ಗೆಲುವು ಅನಿವಾರ್ಯವಾಗಿದೆ.
ರಾಷ್ಟ್ರನಾಯಕ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಬಳಿಕ ಎಐಸಿಸಿ ಅಧ್ಯಕ್ಷರಾಗುವ ಸುವರ್ಣ ಅವಕಾಶ ಕನ್ನಡಿಗರ ಪಾಲಿಗೆ ಬಂದಿದ್ದು, ಇದನ್ನು ಕೈತಪ್ಪದಂತೆ ಕೆಪಿಸಿಸಿ ಸದಸ್ಯರು ಎಚ್ಚರಿಕೆ ವಹಿಸಬೇಕಿದೆ.
ರಾಜ್ಯ, ರಾಷ್ಟ್ರಮಟ್ಟದಲ್ಲಿ ಸರ್ಕಾರ ಮತ್ತು ಪಕ್ಷದಲ್ಲಿ ಅನೇಕ ಹುದ್ದೆ ಅಲಂಕರಿಸಿ, ಸಮರ್ಥವಾಗಿ ನಿರ್ವಹಿಸಿ ಅನ್ಯ ಪಕ್ಷದವರಿಂದಲೂ ಮೆಚ್ಚುಗೆ ಗಳಿಸಿರುವ ಖರ್ಗೆ, ರಾಜ್ಯದ ಹಿತದೃಷ್ಟಿಗೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಹೈದ್ರಾಬಾದ್ ಕರ್ನಾಟಕದ ಅಭಿವೃದ್ದಿಗೆ ಶ್ರಮಿಸಿದ್ದಾರೆ, 371 ಮೂಲಕ ವಿಶೇಷ ಸೌಲಭ್ತ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಲಬುರಗಿಯಲ್ಲಿ ಬೃಹತ್ ಇಎಸ್.ಐ ಆಸ್ಪತ್ರೆ ನಿರ್ಮಾಣ, ರಾಜ್ಯದ ಎಲ್ಲ ಭಾಗದಲ್ಲೂ ರೈತ, ಕಾರ್ಮಿಕರ ಹಿತದ ಪರ ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ದೇಶ ಮತ್ತು ಪಕ್ಷದ ವಿಷಯದಲ್ಲಿ ವೈಯಕ್ತಿಕ ಹಿತಕ್ಕೆ ಧಕ್ಕೆ ಆದರೂ ಚಿಂತಿಸದೆ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ.
ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಖರ್ಗೆ, ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸುವಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ.
ಮೊದಲು ದೇಶ, ಬಳಿಕ ಪಕ್ಷ, ನಂತರ ರಾಜಕಾರಣ ಎಂಬ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ಖರ್ಗೆ, ಪ್ರಸ್ತುತ ದೇಶ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭ ಎಐಸಿಸಿ ಅಧ್ಯಕ್ಷರಾಗಿ ಚುನಾಯಿತರಾಗುವುದು ಬಹಳ ಅಗತ್ಯ ಇದೆ.
ದೇಶದಲ್ಲಿ ಜಾತಿ, ಧರ್ಮ ಮಧ್ಯೆ ಕಲಹ ಮೂಡಿಸುತ್ತಿರುವುದಕ್ಕೆ ಕಡಿವಾಣ ಹಾಕಲು ಖರ್ಗೆ ಆಯ್ಕೆ ಅನಿವಾರ್ಯವಾಗಿದೆ.
ಅನುಭವಿ ಸಂಸದೀಯ ಪಟು, ಮುತ್ಸದ್ದಿ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ಕೆಪಿಸಿಸಿ ಸದಸ್ಯರು ಒಗ್ಗೂಡಿ .17ರಂದು ನಡೆಯಲಿರುವ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ದೇಶ ಹಾಗೂ ಪಕ್ಷದ ಹಿತ ಕಾಯಬೇಕು.
ವಿಶಾಲ ಹೃದಯದ, ಗಟ್ಡಿ ನಾಯಕ, ದೇಶದ ಹಿತ ವಿಷಯದಲ್ಲಿ ರಾಜೀ ರಹಿತ ರಾಜಕಾರಣಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರೆ ಅದು ಕನ್ನಡಿಗರ ಗೆಲುವು ಆಗಲಿದೆ. ಜೊತೆಗೆ ರಾಷ್ಟ್ರದಲ್ಲಿ ಪಕ್ಷವು ಅಧಿಕಾರಕ್ಕೆ ಬರುವಲ್ಲಿ ಸಹಕಾರಿ ಆಗಲಿದೆ ಎಂದು ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.