ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಸುದ್ದಿಒನ್ ವೆಬ್ ಡೆಸ್ಕ್

ನವದೆಹಲಿ, (ಅ.26) : ಇಲ್ಲಿನ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕೇಂದ್ರ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಅಧಿಕಾರ ಸ್ವೀಕರಿಸಿದರು.

ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರಿಂದ ಖರ್ಗೆ ಪ್ರಮಾಣ ಪತ್ರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಉಪಸ್ಥಿತರಿದ್ದರು.

ಅಕ್ಟೋಬರ್ 19 ರಂದು ನಡೆದ ಚುನಾವಣೆಯಲ್ಲಿ ಪಕ್ಷದ ಉನ್ನತ ಹುದ್ದೆಯ ರೇಸ್‌ನಲ್ಲಿ ಶಶಿ ತರೂರ್ ಅವರನ್ನು ಭಾರಿ ಅಂತರದಿಂದ ಸೋಲಿಸಿದ ನಂತರ 24 ವರ್ಷಗಳಲ್ಲಿ ಖರ್ಗೆ ಮೊದಲ ಗಾಂಧಿಯೇತರ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು.

ಮಲ್ಲಿಕಾರ್ಜುನ ಖರ್ಗೆ ಇಂದು ಕಾಂಗ್ರೆಸ್ ಉನ್ನತ ಹುದ್ದೆಗೆ ಅಧಿಕಾರ ವಹಿಸಿಕೊಂಡಿದ್ದು, ಎಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರು, ಸಂಸದರು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಸಿಎಲ್‌ಪಿ ನಾಯಕರು, ಮಾಜಿ ಸಿಎಂಗಳು, ಮಾಜಿ ರಾಜ್ಯಾಧ್ಯಕ್ಷರು ಮತ್ತು ಇತರ ಎಐಸಿಸಿ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಎಲ್ಲ ನಾಯಕರಿಗೆ ಆಹ್ವಾನ ಕಳುಹಿಸಿದ್ದರು.

ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ತಮ್ಮ ಮೊದಲ ಭಾಷಣದಲ್ಲಿ, ಖರ್ಗೆ ಅವರು ನಿರ್ಗಮಿಸುವ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಪಕ್ಷದ ಎಲ್ಲಾ ಕಾರ್ಯಕರ್ತರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಪಕ್ಷಕ್ಕಾಗಿ ಅವರು ತನ್ನ ಜೀವನದ ಹಲವು ವರ್ಷಗಳನ್ನು ತ್ಯಾಗ ಮಾಡಿದ್ದಾರೆ” ಎಂದು ಅವರು ಹೇಳಿದರು.

ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್ ಅವರಿಗೂ ಖರ್ಗೆ ಅಭಿನಂದನೆ ಸಲ್ಲಿಸಿದರು. ಶಶಿ ತರೂರ್ ಅವರನ್ನೂ ನಾನು ಅಭಿನಂದಿಸಲು ಬಯಸುತ್ತೇನೆ. ಅವರನ್ನು ಭೇಟಿಯಾಗಿ ಪಕ್ಷವನ್ನು ಹೇಗೆ ಮುನ್ನಡೆಸಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *