ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 04 : ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಮತ್ತು ಸಾಹಿತ್ಯದ ಬಂಡಿ ಸುರಕ್ಷಿತವಾಗಿ ಗುರಿ ತಲುಪಬೇಕು. ನಿರಂತರ ಪ್ರಯತ್ನ ಮತ್ತು ಸಾಧನೆಯಿಲ್ಲದೆ ಗುರಿಮುಟ್ಟಲು ಸಾಧ್ಯವಾಗದು. ಪ್ರಶಿಕ್ಷಣಾರ್ಥಿಗಳಲ್ಲಿ ದೃಢತೆಯಿದ್ದರೆ ಏನನ್ನಾದರೂ ಸಾಧಿಸಬಹುದು. ಕನ್ನಡನಾಡಿಗೆ ಏನೆಲ್ಲಾ ಸಮಸ್ಯೆಗಳು ಎದುರಾದರೂ ಎದೆಗುಂದದೇ ಇದ್ದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿಯಾಗುತ್ತದೆ ಎಂದು ಪ್ರವಾಚಕ ಎನ್.ಜೆ. ಗುರುಪ್ರಸಾದ್ ತಿಳಿಸಿದರು.
ನಗರದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕøತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕರ್ನಾಟಕ ಸಂಭ್ರಮ-50, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯ ವಾಕ್ಯದೊಂದಿಗೆ ನಾಡಗೀತೆ, ರಾಷ್ಟ್ರಗೀತೆ, ರೈತಗೀತೆ ಪ್ರಾಯೋಗಿಕ ತರಬೇತಿ ಕನ್ನಡ ಗೀತಗಾಯನ, ಯೋಗ ತರಬೇತಿ ಮತ್ತು ಕವಿಕಾವ್ಯ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಏಕೀಕರಣಗೊಂಡು ಇಂದಿಗೆ ಐವತ್ತು ವರ್ಷಗಳು ಸಂದಿವೆ. ಆಲೂರು ವೆಂಕಟರಾಯರು, ಡೆಪ್ಯುಟಿ ಚನ್ನಬಸಪ್ಪ ಮುಂತಾದವರು ಕನ್ನಡನಾಡನ್ನು ಒಟ್ಟುಗೂಡಿಸಿ ಸಾರ್ಥಕತೆಯನ್ನು ಮೆರೆದು ಚಿರಸ್ಥಾಯಿಗಳಾಗಿದ್ದಾರೆ. ಕನ್ನಡನಾಡಿನ ಸಾಹಿತ್ಯ, ಸಂಸ್ಕøತಿ ಮತ್ತು ಭಾಷೆ ಶ್ರೀಮಂತಿಕೆಯಿಂದ ಕೂಡಿದೆ. ಪ್ರಶಿಕ್ಷಣಾರ್ಥಿಗಳು ತಮ್ಮ ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ ಎಂದರು.
ಪ್ರವಾಚಕರಾದ ಎ.ಹನುಮಂತರಾಯ ಇವರು ಸಾಹಿತ್ಯ ಕ್ಷೇತ್ರದ ಅಶ್ವಿನಿ ದೇವತೆ ಟಿ.ಎಸ್.ವೆಂಕಣ್ಣಯ್ಯ ಇವರ ಕವಿಕಾವ್ಯ ಪರಿಚಯ ನೀಡಿ ಮಾತನಾಡುತ್ತ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕುವೆಂಪುರವರಿಗೆ ಗುರುಗಳಾಗಿದ್ದರು. ಶ್ರೀರಾಮಾಯಣ ದರ್ಶನಂ ಮಹಾಕೃತಿಯನ್ನು ಟಿ.ಎಸ್.ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ. ಮುಂದೆಂದೂ ಕನ್ನಡಿಗರು ಮರೆಯಲಾರದ ಸಾಹಿತ್ಯ ರಚಸಿದ ಗುರುಶಿಷ್ಯರ ಸಂಬಂಧವನ್ನು ಗಟ್ಟಿಗೊಳಿಸಿದ್ದಾರೆ ಎಂದರು.
ಉಪನ್ಯಾಸಕರಾದ ಡಿ.ನರಸಿಂಹಪ್ಪ, ಟಿ.ಗೋವಿಂದಪ್ಪ, ಬಿ.ಜಿ.ಹೇಮಾಲತ, ಎಸ್.ಜಿ.ಸರಸ್ವತಿ, ದೈಹಿಕ ಶಿಕ್ಷಣ ಬೋಧಕ ಈ.ರಘುನಾಥ, ಶೈಕ್ಷಣಿಕ ತಂತ್ರಜ್ಞಾನದ ಬೋಧಕಿ ಕೆ.ಬಿ.ಪುಷ್ಪಲತ, ಚಿತ್ರಕಲಾ ಬೋಧಕಿ ಸವಿತಾ ಪೂಜಾರಿ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು. ಯೋಗ ತರಬೇತುದಾರ ಎಂ.ಬಿ.ಮುರುಳಿ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ, ಸಂಸ್ಥೆಯ ನಿರ್ದೇಶಕಿ ಹಾಗೂ ಯೋಗಶಿಕ್ಷಕಿ ಎಸ್.ಕೆ.ಸುನಿತ ತರಬೇತಿ ನೀಡಿದರು. ಮದಕರಿಪುರದ ಸ.ಹಿ.ಪ್ರಾ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಸೈಯದ್‍ಅಯಾನ್ ಕನ್ನಡನಾಡಿನ 224 ವಿಧಾನಸಭಾ ಕ್ಷೇತ್ರಗಳು, ಜಿಲ್ಲೆಗಳು, ಇಲ್ಲಿಯವರೆಗಿನ ಮುಖುಮಂತ್ರಿಗಳ ಹಾಗೂ ಪ್ರಧಾನಮಂತ್ರಿಗಳ ಹೆಸರುಗಳು, ನದಿಗಳು, ಕೇಂದ್ರಾಡಳಿತ ಪ್ರದೇಶಗಳು, ರಾಶಿ ನಕ್ಷತ್ರಗಳು, ಮಾಸ ಮತ್ತು ತಿಥಿಗಳು ಹಲವಾರು ವಿಷಯಗಳ ಬಗ್ಗೆ ಜ್ಞಾನಪೂರ್ಣ ವಿದ್ವತ್ತನ್ನು ಪ್ರದರ್ಶಿಸಿ ಮೆಚ್ಚುಗೆಗಳಿಸಿ ಸಂಸ್ಥೆಯ ಗೌರವ ಸ್ವೀಕರಿಸಿದರು.
ಪ್ರಶಿಕ್ಷಣಾರ್ಥಿಗಳಿಗೆ ಸರ್ಕಾರ ನಿಗಧಿಪಡಿಸಿದ ನಾಡಗೀತೆ, ರಾಷ್ಟ್ರಗೀತೆ, ರೈತಗೀತೆ, ಹುಯಿಲುಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ವಿರಚಿತ ಎಲ್ಲಾದರು ಇರು ಎಂತಾದರು ಇರು, ದ.ರಾ.ಬೇಂದ್ರೆ ಅವರ ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ಧಯ್ಯ ಪುರಾಣಿಕ್ ಬರೆದ ಹೊತ್ತಿತೋ ಹೊತ್ತಿತೂ ಕನ್ನಡದ ದೀಪ, ಚನ್ನವೀರ ಕಣವಿಯವರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡದ ಧ್ವನಿಮುದ್ರಿತ ಗೀತೆಗಳೊಂದಿಗೆ ಯೋಗ ತರಬೇತಿ ನೀಡಲಾಯಿತು. ಪ್ರಶಿಕ್ಷಣಾರ್ಥಿಗಳಾದ ನಯನ, ಅಮೃತ ಪ್ರಾರ್ಥಿಸಿದರು. ಗೌತಮಿ, ಅಂಬಿಕಾ ನಿರೂಪಿಸಿದರು.