ಸುದ್ದಿಒನ್, ಚಿತ್ರದುರ್ಗ, ಜನವರಿ.16 : ಗೋಶಾಲೆ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿ ಶಾಸಕ ಟಿ. ರಘುಮೂರ್ತಿ ಮಾತನಾಡಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಸಬಾ, ದೊಡ್ಡ ಉಳ್ಳಾರ್ತಿ, ಪರಶುರಾಂಪುರ ಹೋಬಳಿಯ ಚೌಳೂರು, ಹಿರೇಕೆರೆ ಕಾವಲು, ತುರುವನೂರು ಹೋಬಳಿಯ ಬೆಳಗಟ್ಟ ಸೇರಿದಂತೆ ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 5 ಗೋಶಾಲೆ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ದೇವರ ಎತ್ತುಗಳಿಗೆ ಮೇವು ಒದಗಿಸಲು ತಿಂಗಳಿಗೆ ರೂ.22 ಲಕ್ಷ ಅನುದಾನದ ಅವಶ್ಯಕತೆ ಇದೆ ಎಂದು ಸರ್ಕಾರದ ಗಮನಕ್ಕೆ ತಂದ ದೇವರ ಎತ್ತುಗಳ ಮೇವಿಗೆ ಸರ್ಕಾರದಿಂದ ರೂ.10 ಲಕ್ಷ ಅನುದಾನ ಮಂಜೂರಾಗಿದ್ದು, ಮೇವು ಪೂರೈಕೆ ಮಾಡಲಾಗಿದೆಯೇ ಎಂದು ಶಾಸಕ ರಘುಮೂರ್ತಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಬಾಬುರತ್ನ ಅವರು ಈಗಾಗಲೆ 02 ಲೋಡ್ ಮೇವು ದೇವರ ಎತ್ತುಗಳಿಗಾಗಿ ಪೂರೈಕೆ ಮಾಡಲಾಗಿದೆ ಎಂದರು.
ಮೇವು ಪೂರ್ಯಕೆ ಕುರಿತು ಶಾಸಕರ ಗಮನಕ್ಕೆ ತಾರದೇ ಇರುವುದಕ್ಕೆ ರಘುಮೂರ್ತಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ತಡಮಾಡದೇ ಶೀಘ್ರವೇ ಮೇವು ಪೂರೈಕೆಗೆ ಕ್ರಮವಹಿಸಬೇಕು ಎಂದು ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಗೋಶಾಲೆಗಳ ಸಮರ್ಪಕ ನಿರ್ವಹಣೆಗೆ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಾಧಿಕಾರಿಯನ್ನು ನಿಯುಕ್ತಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಸಲಹೆ ನೀಡಿದರು.