ಚಿತ್ರದುರ್ಗ. ಡಿ.05: ಕಡಿಮೆ ಕರ ವಸೂಲಾತಿ ಮಾಡಿದ ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಜಾಥಾ, ಟಾಂ ಟಾಂ, ಸ್ವಚ್ಛ ವಾಹಿನಿ ಆಟೋ ಮೂಲಕ ಹೆಚ್ಚು ಹೆಚ್ಚು ಪ್ರಚಾರಗೊಳಿಸಿ, ಕರ ವಸೂಲಾತಿ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳು ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗ್ರಾಮ ಪಂಚಾಯಿತಿಗಳಲ್ಲಿ ಕಡಿಮೆ ಕರ ವಸೂಲಾತಿ ಮಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕರ ವಸೂಲಿಗಾರರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಲ್ಲಿ ಇಲ್ಲಿವರೆಗೂ ಶೇ.33.80ರಷ್ಟು ಪ್ರಗತಿ ಸಾಧಿಸಲಾಗಿದ್ದು, ಜಿಲ್ಲಾವಾರು ಪ್ರಗತಿಗೆ ಹೋಲಿಸಿದಾಗ ಚಿತ್ರದುರ್ಗ ಜಿಲ್ಲೆಯು ತುಂಬಾ ಕಡಿಮೆ ಪ್ರಗತಿ ಸಾಧಿಸಲಾಗಿದೆ. ಆದ್ದರಿಂದ ಕಡಿಮೆ ಕರ ವಸೂಲಾತಿ ಮಾಡಿದ ಗ್ರಾಮ ಪಂಚಾಯಿತಿಗಳಲ್ಲಿ ಜಾಥಾ ಮೂಲಕ, ಟಾಂ ಟಾಂ ಮೂಲಕ, ಸ್ವಚ್ಛ ವಾಹಿನಿ ಆಟೋ ಮೂಲಕ ಹೆಚ್ಚು ಹೆಚ್ಚು ಪ್ರಚಾರಗೊಳಿಸಬೇಕು. ಹಾಗೆಯೇ ಪ್ರತಿ ಮನೆ ಮನೆಗೂ ಭೇಟಿ ನೀಡಿ ಗ್ರಾಮಸ್ಥರ ಮನವೋಲಿಸಿ, ಹೆಚ್ಚಿನ ತೆರಿಗೆ ಸಂಗ್ರಹಣೆ ಮಾಡಲು ಸೂಚನೆ ನೀಡಿದ ಅವರು, ಇನ್ನೂ ಒಂದು ತಿಂಗಳೊಳಗೆ ಕಡ್ಡಾಯವಾಗಿ ಶೇ.80ರಷ್ಟು ಕರ ವಸೂಲಾತಿ ಹೆಚ್ಚಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೆಚ್ಚು ಕರವಸೂಲಿ ಮಾಡಿದ ಪಿಡಿಒ, ಬಿಲ್ ಕಲೆಕ್ಟರ್‍ಗೆ ಸನ್ಮಾನ: ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚಿನ ಕರ ವಸೂಲಿ ಮಾಡಿದ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಬಿಲ್ ಕಲೆಕ್ಟರ್‍ಗಳನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ತಿಳಿಸಿದರು.
ಕರ ವಸೂಲಾತಿಯಲ್ಲಿ ಕಡಿಮೆ ಪ್ರಗತಿ ಸಾಧಿಸಿದ ಪಿಡಿಒ ಹಾಗೂ ಬಿಲ್ ಕಲೆಕ್ಟರ್‍ಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ., ಸಹಾಯಕ ಕಾರ್ಯದರ್ಶಿ ಎನ್.ರವಿ, ಸಹಾಯಕ ನಿರ್ದೇಶಕ (ಆಡಳಿತ) ದಾದಾಪೀರ್, ಸಹಾಯಕ ಡಿಪಿಎಂಯು ಸೈಯಿದಾ ಪಿಜಾ ಇರಮ್ ಸೇರಿದಂತೆ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಬಿಲ್ ಕಲೆಕ್ಟರ್‍ಗಳು ಇದ್ದರು.