ವರದಿ ಮತ್ತು ಫೋಟೋ ಕೃಪೆ, ರಂಗಸ್ವಾಮಿ,ಗುಬ್ಬಿ 99019 53364

ಸುದ್ದಿಒನ್, ಗುಬ್ಬಿ, ಜನವರಿ. 31 :ಮಕ್ಕಳಿಗೆ ದೇವಸ್ಥಾನದ ಘಂಟೆಗಿಂತ ಶಾಲೆಯ ಘಂಟೆ ಹೆಚ್ಚು ಕೇಳುವಂತೆ ಮಾಡಬೇಕು ಎಂದು ಆದಿ ಜಾಂಬವ ಹಿರಿಯೂರು ಶಾಖ ಮಠದ ಷಡಕ್ಷರಿ ಮನಿ ಮಹಾ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಚೇಳೂರಿನಲ್ಲಿ ಈರಮಾಸ್ತಮ್ಮ ದೇವಿ ಕಳಶ ಸ್ಥಾಪನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಸಮಾಜದ ಮುಖ್ಯ ವಾಹಿನಿಗೆ ಬಾರದ ಸಮುದಾಯಗಳು ಆಧ್ಯಾತ್ಮವನ್ನು ಹೆಚ್ಚು ನಂಬುತ್ತೇವೆ. ನಂಬಿಕೆ ಇರಬೇಕೆ ಹೊರತು ಮೂಢನಂಬಿಕೆ ಇರಬಾರದು. ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಶಿಕ್ಷಣವಂತರನ್ನಾಗಿ ಮಾಡಬೇಕು. ಶಿಕ್ಷಣ ಎಲ್ಲಿ ಇರುತ್ತದೆಯೋ ಅಲ್ಲಿ ಮೋಸಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು. ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡುವವರೆಗೂ ನಿರಂತರ ಹೋರಾಟ ಮಾಡುತ್ತೇವೆ. ಸರ್ಕಾರ ಕಿವಿಗೊಡದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದ ಪರವಾಗಿ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ ಹಿರಿಯರನ್ನು ಗೌರವಿಸಿ ತಂದೆ ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳುವವರು ಸಮಾಜಕ್ಕೆ ಮಾದರಿಯಾಗಿರುತ್ತಾರೆ.ಪ್ರತಿಯೊಬ್ಬರೂ ಸಹ ವಿದ್ಯಾವಂತರಾಗಿ ಸರಿಯಾದ ನಡೆ ನುಡಿ ಆಚಾರ ವಿಚಾರಗಳಿಂದ ಬದುಕಬೇಕು ಎಂದ ಅವರು ದೇವಸ್ಥಾನಕ್ಕೆ ಜಾಗ ನೀಡಿದ ಸುಜಾತ ಲೇಟ್ ನಟರಾಜು ಕುಟುಂಬವನ್ನು ಸ್ಮರಿಸಿದರು.
ಪಟೇಲ್ ಹಿತೇಶ್ ಮಾತನಾಡಿ ಚೇಳೂರು ದೇವತೆಗಳ ನಾಡು ಪಟ್ಟಣದಲ್ಲಿರುವ 101 ದೇವರುಗಳಲ್ಲಿ ಈರ ಮಾಸ್ತಮ್ಮ ದೇವಿಯು ಒಂದಾಗಿದೆ, ಸಮುದಾಯ ದಾನಿಗಳ ಸಹಕಾರದೊಂದಿಗೆ ಉತ್ತಮ ದೇವಾಲಯ ನಿರ್ಮಾಣವಾಗಿದೆ ಸರ್ವರು ಶಾಂತಿಯಿಂದ ಬಾಳಿ ಬದುಕಬೇಕಾಗಿದೆ. ಒಗ್ಗಟ್ಟಿನಿಂದ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಚೇಳೂರು ಬೆಳೆಯುತ್ತಿದೆ ಇದಕ್ಕೆ ಎಲ್ಲರ ಸಹಮತವೇ ಕಾರಣವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ ಪಂ ಅಧ್ಯಕ್ಷ ಸಿಎಂ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದರಾಜು, ವಿಜಯಕುಮಾರ್, ಚೇಳೂರು ಶಿವನಂಜಪ್ಪ, ಬಸವರಾಜು, ಮೋಹನ್ ಕುಮಾರ್, ಲಿಂಗರಾಜು, ಅಮಾನಿಕೆರೆ ಬಸವರಾಜು, ಲಕ್ಕೆನಹಳ್ಳಿ ನರಸಿಯಪ್ಪ, ಪಟೇಲ್ ಬಸವರಾಜು, ತಿಮ್ಮಯ್ಯ, ಕಲಾವಿದ ನರಸಿಂಹಮೂರ್ತಿ, ನಲ್ಲೂರ್ ಶಿವಣ್ಣ, ಪ್ರಾಂಶುಪಾಲ ದೇವರಾಜು , ತಿಮ್ಮಯ್ಯ, ರಂಗಸ್ವಾಮಯ್ಯ, ವೆಂಕಟೇಶ್, ಮಾದೇವಯ್ಯ, ಭಕ್ತಾದಿಗಳು ಹಾಜರಿದ್ದರು.


