ಆರ್ಥಿಕವಾಗಿ ಬದುಕು ಕಟ್ಟಿಕೊಂಡು ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ ಉತ್ತಮ ಭವಿಷ್ಯ ಕೊಡಿ : ಉಪವಿಭಾಗಾಧಿಕಾರಿ ಆರ್. ಚಂದ್ರಯ್ಯ

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ,(ಡಿ.31): ಎಲ್ಲಾ ಜಾತಿ ಧರ್ಮದವರು ಸಮಾನವಾಗಿ ಬದುಕುವ ಅವಕಾಶ ಸಂವಿಧಾನ ನೀಡಿದೆ. ಅದಕ್ಕಾಗಿ ವೈಷಮ್ಯ ಬೇಡ ಎಂದು ಉಪವಿಭಾಗಾಧಿಕಾರಿ ಆರ್. ಚಂದ್ರಯ್ಯ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಕಲಾನಿಕೇತನ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯಿತೋಳು ಗ್ರಾಮದಲ್ಲಿ ಶನಿವಾರ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ತಡೆ ಜನಜಾಗೃತಿ ಕಾರ್ಯಕ್ರಮವನ್ನು ಅಂಬೇಡ್ಕರ್, ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಗಾಟಿಸಿ ಮಾತನಾಡಿದರು.

ವಿವಿಧತೆಯಲ್ಲಿ ಏಕತೆಯುಳ್ಳ ದೇಶ ನಮ್ಮದು. ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲಾ ಜಾತಿ ಧರ್ಮದವರು ವಾಸಿಸುತ್ತಿದ್ದಾರೆ. ಆಯಿತೋಳು ಗ್ರಾಮದಲ್ಲಿ ಕಳೆದ ಆರು ತಿಂಗಳ ಹಿಂದೆ ಕ್ಷುಲ್ಲಕ ಕಾರಣಕ್ಕಾಗಿ ಎರಡು ಜಾತಿಗಳ ನಡುವೆ ಗಲಾಟೆ ನಡೆದಿದೆ. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಬೆಳೆಸುವುದು ಸರಿಯಲ್ಲ. ಯುವಕರು ಕಾನೂನು ಕೈಗೆತ್ತಿಕೊಳ್ಳಬಾರದು.
ಬೇರೆಯವರಿಗೆ ಮಾದರಿಯಾಗಿ ಬದುಕಬೇಕೆಂದು ತಿಳಿಸಿದರು.

ದಿನವೂ ಸ್ನಾನ ಮಾಡಿ ಬಟ್ಟೆ ಬದಲಾಯಿಸಿದರೆ ಸ್ವಚ್ಚತೆಯಲ್ಲ. ಮನಸ್ಸಿನಲ್ಲಿರುವ ಕೊಳೆಯನ್ನು ಮೊದಲು ತೊಳೆಯಬೇಕು. ವರ್ಷಕ್ಕೊಂದು ಹಬ್ಬಗಳು ಬರುತ್ತೆ ಹೋಗುತ್ತೆ. ಅದಕ್ಕಾಗಿ ಗ್ರಾಮಸ್ಥರು ತಲೆಕೆಡಿಸಿಕೊಳ್ಳಬೇಡಿ. ಆರ್ಥಿಕವಾಗಿ ಬದುಕು ಕಟ್ಟಿಕೊಂಡು ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ ಉತ್ತಮ ಭವಿಷ್ಯ ಕೊಡಿ. ಮನಸ್ಸಿನಲ್ಲಿ ಬದಲಾವಣೆಯಾಗಬೇಕೆಂದು ಹೇಳಿದರು.

ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಬಾಲಚಂದ್ರನಾಯಕ್ ಮಾತನಾಡುತ್ತ ತಪ್ಪು ಮಾಡಿ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ದ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದೇ ನಮ್ಮ ಕರ್ತವ್ಯ. ಗಲಾಟೆ, ಘರ್ಷಣೆಯಲ್ಲಿ ತೊಡಗುವವರನ್ನು ಬಂಧಿಸಿ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ಅಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದರಿಂದ ಗ್ರಾಮದಲ್ಲಿ ಜಾತಿ ಜಾತಿಗಳ ನಡುವೆ ಜಿದ್ದು ಬೆಳೆಯುತ್ತದೆಯೇ ವಿನಃ ಯಾವುದೇ ಪ್ರಯೋಜನವಿಲ್ಲ. ಜಾತಿಯಲ್ಲಿ ಯಾರು ಮೇಲು-ಕೀಳಲ್ಲ ಎಲ್ಲರೂ ಸಮಾನರು ಎನ್ನುವ ಕಲ್ಪನೆ ನಿಮ್ಮಲ್ಲಿ ಬರಬೇಕು. ಕಾನೂನು ಕಠಿಣವಾಗಿದೆ. ಎಲ್ಲಾ ಜಾತಿಯವರು ಸಹಭಾಳ್ವೆ, ಸಹೋದರತ್ವ, ಪ್ರೀತಿಯಿಂದ ಬದುಕುವುದನ್ನು ಕಲಿಯಿರಿ. ಅಹಂ, ಪ್ರತಿಷ್ಠೆ ಎಲ್ಲಿಯತನಕ ಇರುತ್ತದೋ ಅಲ್ಲಿವರೆಗೂ ಜೀವನದಲ್ಲಿ ಏನನ್ನು ಸಾಧಿಸಲು ಆಗುವುದಿಲ್ಲ. ಗಲಾಟೆ ನಡೆದಾಗ ಅಧಿಕಾರಿಗಳು ಬಂದು ತಿಳುವಳಿಕೆ ನೀಡಬಹುದು.
ಅರ್ಥಮಾಡಿಕೊಂಡು ಇರುವಷ್ಟು ದಿನ ನೆಮ್ಮದಿಯಿಂದಿರಿ ಎಂದು ಆಯಿತೋಳು ಗ್ರಾಮಸ್ಥರಿಗೆ ತಿಳಿಸಿದರು.

ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಮಾತನಾಡಿ ಗ್ರಾಮದಲ್ಲಿ ಎಲ್ಲರೂ ಪ್ರೀತಿ, ಸಹಭಾಳ್ವೆಯಿಂದ ಬದುಕಬೇಕಾದರೆ ಮೊದಲು ತಾಳ್ಮೆಯಿರಬೇಕು. ಸಣ್ಣಪುಟ್ಟ ವಿಷಯಗಳಿಗೆಲ್ಲಾ ಗಲಾಟೆ ಮಾಡಿಕೊಂಡರೆ ಗ್ರಾಮದ ನೆಮ್ಮದಿ ಹಾಳಾಗುತ್ತದೆ. ಆಧುನಿಕ ಯುಗದಲ್ಲಿ ಎಲ್ಲರೂ ಬದುಕುತ್ತಿದ್ದೇವೆ. ಆಲೋಚನೆ, ಬುದ್ದಿಶಕ್ತಿ, ಸಂಸ್ಕಾರ ಬದಲಾಗಬೇಕು. ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಅಭಿವೃದ್ದಿ ಕಂಡುಕೊಳ್ಳಬಹುದು. ಆಚಾರ, ವಿಚಾರಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಕ್ಷುಲ್ಲಕ ವಿಚಾರಗಳಿಗೆ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸಮಾಜ ಕಲ್ಯಾಣ ಇಲಾಖೆ ಸದಾ ನಿಮ್ಮೊಂದಿಗಿರುತ್ತದೆ ಎಂದು ಹೇಳಿದರು.

ಗ್ರಾಮದಲ್ಲಿ ಯಾರೋ ಒಬ್ಬರು ಮಾಡುವ ತಪ್ಪಿನಿಂದ ಇಡಿ ಗ್ರಾಮವೇ ನೊಂದುಕೊಳ್ಳಬೇಕಾಗುತ್ತದೆ. ವೈಮನಸ್ಸುಗಳನ್ನು ಮರೆತಾಗ ಗಲಾಟೆಯಾಗುವುದಿಲ್ಲ. ಎನ್ನುವುದನ್ನು ಮೊದಲು ಗ್ರಾಮಸ್ಥರು ತಿಳಿದುಕೊಳ್ಳಬೇಕು ಎಂದರು.

ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ, ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ, ಗುಡ್ಡದರಂಗವ್ವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊನ್ನೂರ್‍ಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕ್ಯಾತಪ್ಪ, ಶ್ರೀಮತಿ ಸುಧ, ರತ್ನಮ್ಮ, ಯಲ್ಲಪ್ಪ, ಶ್ರೀಮತಿ ಓಬಮ್ಮ, ಆದಿಜಾಂಬವ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗರಾಜ್, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್, ಕಂದಾಯ ನಿರೀಕ್ಷಕ ಶರಣಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಆನಂದ್, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ನಾಸಿರ್‍ಪಾಷ, ಗ್ರಾಮಾಂತರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಶಿವಕುಮಾರ್ ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *